ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸುವಂಥ ಘಟನೆಯೊಂದು ನಡೆದಿದೆ. ಗ್ರಾಮೀಣ ಆರೋಗ್ಯ ಕೇಂದ್ರದ ಸಿಬ್ಬಂದಿ ಶಿಶುವಿನ ತಲೆಯನ್ನು ಕತ್ತರಿಸಿ ತಾಯಿಯ ಗರ್ಭದಲ್ಲೇ ಬಿಟ್ಟಿದ್ದಾರೆ. ಇದು 32 ವರ್ಷದ ಮಹಿಳೆಯ ಪ್ರಾಣಕ್ಕೇ ಅಪಾಯ ತಂದಿಟ್ಟಿದೆ. ತುಂಬು ಗರ್ಭಿಣಿಯಾಗಿದ್ದ ಆ ಮಹಿಳೆ ಹೆರಿಗೆಗಾಗಿ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾಳೆ. ಆದ್ರೆ ಅಲ್ಲಿ ಸ್ತ್ರೀರೋಗ ತಜ್ಞರೇ ಇರಲಿಲ್ಲ.
ಆಸ್ಪತ್ರೆಯಲ್ಲಿದ್ದ ಅನನುಭವಿ ಸಿಬ್ಬಂದಿಯೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಹೆರಿಗೆಯ ವಿಧಾನವೇ ಗೊತ್ತಿಲ್ಲದ ಸಿಬ್ಬಂದಿ ಮಹಿಳೆಯನ್ನು ಮನಬಂದಂತೆ ಹಿಂಸಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿ ಶಿಶುವಿನ ತಲೆಯನ್ನೇ ಕತ್ತರಿಸಿ ಹಾಕಿದ್ದಾರೆ. ಅದನ್ನು ಮಹಿಳೆಯ ಹೊಟ್ಟೆಯೊಳಗೇ ಬಿಟ್ಟಿದ್ದಾರೆ. ಒಂದ್ಕಡೆ ಮಗುವಿನ ದಾರುಣ ಹತ್ಯೆ, ಮತ್ತೊಂದ್ಕಡೆ ಸಿಬ್ಬಂದಿ ಮಾಡಿದ ಯಡವಟ್ಟಿನಿಂದ ಮಹಿಳೆ ಸಾಕಷ್ಟು ನೋವುಂಡಿದ್ದಾಳೆ. ಆಕೆಯ ಗರ್ಭಾಶಯಕ್ಕೆ ತೀವ್ರ ಪೆಟ್ಟು ಬಿದ್ದಿದೆ.
ಮಹಿಳೆಯ ಪ್ರಾಣಕ್ಕೇ ಅಪಾಯ ಎದುರಾದಾಗ ಅವಳನ್ನು ಸಮೀಪದ ಬೇರೊಂದು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಅಲ್ಲಿ ಚಿಕಿತ್ಸಾ ಸೌಲಭ್ಯವೇ ಇರಲಿಲ್ಲ. ನಂತರ ಇನ್ನೊಂದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಮಹಿಳೆಯ ಹೊಟ್ಟೆಯಲ್ಲಿದ್ದ ಶಿಶುವಿನ ತಲೆಯನ್ನು ಹೊರಕ್ಕೆ ತೆಗೆಯಲಾಯ್ತು. ಮಗುವಿನ ತಲೆ ಒಳಗೆ ಸಿಲುಕಿಕೊಂಡಿದ್ದರಿಂದ ತಾಯಿಯ ಗರ್ಭಾಶಯಕ್ಕೆ ಗಾಯವಾಗಿದೆ ಎಂದು ಆಪರೇಶನ್ ಮಾಡಿದ ವೈದ್ಯರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಪ್ರತ್ಯೇಕ ತನಿಖೆ ನಡೆಸುವಂತೆ ಮಹಿಳೆಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಹೆರಿಗೆ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಮಹಿಳೆಯ ಛಾಯಾಚಿತ್ರಗಳನ್ನು ಮತ್ತು ವೀಡಿಯೊಗಳನ್ನು ತೆಗೆದುಕೊಂಡಿರುವುದು ಕೂಡ ಪತ್ತೆಯಾಗಿದೆ. ಮೊಬೈಲ್‌ನಲ್ಲಿ ಆ ದೃಶ್ಯಗಳನ್ನು ಸೆರೆಹಿಡಿದು ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಿರೋದು ಬೆಳಕಿಗೆ ಬಂದಿದೆ. ಈ ಅಮಾನುಷ ಘಟನೆ ಬಗ್ಗೆ ಕೂಲಂಕುಷ ತನಿಖೆಯಾದರೆ ಮಾತ್ರ ಮಗು ಕಳೆದುಕೊಂಡಿರುವ ಮಹಿಳೆಗೆ ನ್ಯಾಯ ಸಿಗಬಹುದು.