ಬಲೂನಿನ ಜೊತೆ ಆಟವಾಡೋದನ್ನು ಮಕ್ಕಳು ತುಂಬಾನೇ ಇಷ್ಟಪಡ್ತಾರೆ. ಬಲೂನು ಊದೋದು, ಅದರ ಜೊತೆ ಆಟವಾಡೋದು ಇವೆಲ್ಲ ಪ್ರತಿಯೊಬ್ಬರೂ ಮಾಡಿದ ಕೆಲಸವೇ. ಆದರೆ ಬಲೂನು ಊದುತ್ತಿದ್ದ ವೇಳೆ ಗಂಟಲಿಗೆ ಸಿಲುಕಿದ ಪರಿಣಾಮ ಆರು ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ ಆಘಾತಕಾರಿ ಘಟನೆಯು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಬಲೂನು ಊದುತ್ತಿದ್ದ ವೇಳೆ ಆ ಬಲೂನು ಬಾಲಕನ ಗಂಟಲಿನೊಳಕ್ಕೆ ಸಿಲುಕಿಕೊಂಡಿದೆ. ಇದರಿಂದ ಬಾಲಕನಿಗೆ ಉಸಿರುಗಟ್ಟಿದ ಅನುಭವ ಉಂಟಾಗಿದೆ. ಕುಟುಂಬಸ್ಥರು ಬಲೂನನ್ನು ತೆಗೆಯಲು ಯತ್ನಿಸಿದರೂ ಸಹ ವಿಫಲರಾಗಿದ್ದಾರೆ. ಕೂಡಲೇ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ ಎಂದು ವೈದ್ಯರು ಹೇಳಿದ್ದಾರೆ.
ಇದೊಂದು ಆಕಸ್ಮಿಕ ಸಾವು ಎಂದು ನಂದನವನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.