ಕೆಲ ಮುಸ್ಲಿಂ ಹೆಣ್ಣು ಮಕ್ಕಳು ವಿಚ್ಚೇದನ ಬಯಸಿ ಶರಿಯತ್ ಕೌನ್ಸಿಲ್ ಮೊರೆ ಹೋಗುತ್ತಿದ್ದಾರೆ. ಇಂಥಹದ್ದೇ ಘಟನೆಯೊಂದು ನಡೆದಿದ್ದು, ಇದು ಕೋರ್ಟ್ ವರೆಗೆ ಹೋಗಿದೆ. 2017ರಲ್ಲಿ ಶರಿಯತ್ ಕೌನ್ಸಿಲ್‌ನಿಂದ ತನ್ನ ಪತ್ನಿ ಪಡೆದಿರುವ ಖುಲಾ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಕೋರಿ ವ್ಯಕ್ತಿಯೊಬ್ಬರು ಮನವಿ ಸಲ್ಲಿಕೆ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರು ಮಹತ್ವದ ತೀರ್ಪು ನೀಡಿದ್ದಾರೆ.
ಡಿವೊರ್ಸ್ ಬೇಕು ಎಂದು ಬಯಸುವ ಮುಸ್ಲಿಂ ಮಹಿಳೆಯರು ಕೌಟುಂಬಿಕ ನ್ಯಾಯಾಲಯಗಳನ್ನು ಸಂಪರ್ಕಿಸಬೇಕೇ ಹೊರತು ಶರಿಯತ್ ಕೌನ್ಸಿಲ್‌ಗಳಂತಹ ಖಾಸಗಿ ಸಂಸ್ಥೆಗಳನ್ನಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಖಾಸಗಿ ಸಂಸ್ಥೆಗಳು ನೀಡುವ ಮುಕ್ತ ಪ್ರಮಾಣಪತ್ರಗಳು ಕಾನೂನು ಬಾಹಿರವಾಗಿರಲಿವೆ ಎಂದು ನ್ಯಾಯಮೂರ್ತಿ ಸಿ. ಶಿವರಾಮನ್ ಅವರ ಪೀಠವು ಅಭಿಪ್ರಾಯಪಟ್ಟಿದೆ.
ತಮಿಳುನಾಡು ಸೊಸೈಟಿಗಳ ನೋಂದಣಿ ಕಾಯಿದೆ, 1975 ರ ಅಡಿಯಲ್ಲಿ ಶರಿಯತ್ ಕೌನ್ಸಿಲ್ ನೋಂದಾವಣೆ ಮಾಡಿದೆ. ಆದರೂ ವಿಚ್ಚೇದನ ಪ್ರಮಾಣಪತ್ರಗಳನ್ನು ನೀಡಲು ಈ ಖಾಸಗಿ ಸಂಸ್ಥೆಗೆ ಯಾವುದೇ ಅಧಿಕಾರವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಕೌಟುಂಬಿಕ ನ್ಯಾಯಾಲಯಗಳ ಕಾಯಿದೆ, 1984 ರ ಸೆಕ್ಷನ್ 7(1)(ಬಿ) ಪ್ರಕಾರ, ನ್ಯಾಯಾಂಗ ವೇದಿಕೆಗೆ ಮಾತ್ರ ವಿವಾಹ ರದ್ದುಗೊಳಿಸುವ ಆದೇಶವನ್ನು ಹೊರಡಿಸಲು ಅಧಿಕಾರವಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.