alex Certify ಶರಾವತಿ ಸಂತ್ರಸ್ಥರಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ; ಮಧು ಬಂಗಾರಪ್ಪ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶರಾವತಿ ಸಂತ್ರಸ್ಥರಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ; ಮಧು ಬಂಗಾರಪ್ಪ ಹೇಳಿಕೆ

ಶಿವಮೊಗ್ಗ: ಶರಾವತಿ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಸಿಗುವ ತನಕ ಕಾಂಗ್ರೆಸ್ ಬಹುದೊಡ್ಡ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು.

ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಾವತಿ ಸಂತ್ರಸ್ಥರ ಸಮಸ್ಯೆಯನ್ನು ಬಿಜೆಪಿ ಸರ್ಕಾರ ದ್ವಿಗುಣಗೊಳಿಸುತ್ತಿದೆ. ಅರಣ್ಯ ಅಧಿಕಾರಿಗಳು ಸಂತ್ರಸ್ಥರಿಗೆ ನೋಟಿಸ್ ನೀಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಸುಮಾರು 18 ಸಾವಿರಕ್ಕೂ ಅಧಿಕ ಕುಟುಂಬಗಳು ಅತಂತ್ರವಾಗಿವೆ. ಇನ್ನು ನಾವು ಸುಮ್ಮನಿರುವುದಿಲ್ಲ. ಹಿರಿಯರಾದ ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನೂ ಒಳಗೊಂಡಂತೆ ಬಹುದೊಡ್ಡ ಹೋರಾಟ ಪ್ರಾರಂಭಿಸುತ್ತೇವೆ ಎಂದರು.

ಕೇಂದ್ರ ಅರಣ್ಯ ಹಕ್ಕು ಕಾಯಿದೆ, ಶರಾವತಿ ಮುಳುಗಡೆ ಸಂತ್ರಸ್ತರ ಭೂಹಕ್ಕಿನ ಕಾಯಿದೆ ಸಮರ್ಪಕ ಅನುಷ್ಟಾನ, ಬಗರ್ ಹುಕುಂ ಸಮಸ್ಯೆ ಹಾಗೂ ಅಡಿಕೆ ಬೆಳೆಗಾರ ಸಮಸ್ಯೆ ಕುರಿತಂತೆ ಅಧ್ಯಯನ ವರದಿ ಸಲ್ಲಿಸಲು ಕೆಪಿಸಿಸಿಯಿಂದ 9 ಜನರ ತಾಂತ್ರಿಕ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಕರ್ತವ್ಯ ಲೋಪದಿಂದಾಗಿ ಇಂದು ಶರಾವತಿ ಮುಳುಗಡೆ ಸಂತ್ರಸ್ತರು ಜಮೀನು ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಪರಿಸರವಾದಿಗಳ ಹೆಸರಿನಲ್ಲಿ ಕೆಲವರು ಹೈಕೋರ್ಟ್ ಗೆ ಹೋಗಿರುವುದರಿಂದ ಡಿ ನೋಟಿಫಿಕೇಶನ್ ರದ್ದಾಗಿದೆ. ಇದು ಇಡೀ ಶರಾವತಿ ಮುಳುಗಡೆ ಸಂತ್ರಸ್ತರ ಬದುಕಿನ ಪ್ರಶ್ನೆಯಾಗಿದೆ ಎಂದರು.

ಶಿವಮೊಗ್ಗ ತಾಲ್ಲೂಕಿನ ಕೂಡಿ ಮತ್ತು ಕೂರಂಬಳ್ಳಿಯ ಎರಡು ಸರ್ವೆ ನಂಬರ್ ಗಳಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಹೈಕೋರ್ಟ್ ಕೇಂದ್ರದ ಅನುಮತಿ ಪಡೆದಿಲ್ಲವೆಂದು ಹೇಳಿದೆ. ಆದರೆ ಸರ್ಕಾರ ಎಲ್ಲಾ ಮುಳುಗಡೆ ಸಂತ್ರಸ್ತರು ಇತರೆ 56 ಪ್ರಕರಣದಲ್ಲಿ ಖುಲ್ಲಾ ಮಾಡಲು ಮುಂದಾಗಿದೆ. ಕಾನೂನು ಮಾಡಿ ಸಂತ್ರಸ್ತರನ್ನು ಕೂರಿಸಿದ್ದೇ ಸರ್ಕಾರ. ಆದರೆ ಈಗ ಖುಲ್ಲಾ ಮಾಡುವುದಾಗಿ ಹೇಳುತ್ತಿರುವುದು ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಂದಾಯ ಕಾಯಿದೆ 94 ಸಿ ಹಾಗೂ 94 ಸಿಸಿ ಗೆ ತಿದ್ದುಪಡಿ ತಂದು ಬಗರ್ ಹುಕುಂ ಸಾಗುವಳಿದಾರರಿಗೆ ಅನುಕೂಲ ಮಾಡಿದ್ದರೂ ಕೂಡ ಅದನ್ನು ಸಮರ್ಥವಾಗಿ ಜಾರಿಗೊಳಿಸಿಲ್ಲ. ಭೂ ಅಕ್ರಮೀಕರಣ ನ್ಯಾಯಲಯ ಸ್ಥಾಪಿಸಿ ರೈತರು ಬೆಂಗಳೂರು ಕೋರ್ಟ್ ಗೆ ಹೋಗುವಂತೆ ಮಾಡಲಾಗಿದೆ. ಮುಳುಗಡೆ ಸಂತ್ರಸ್ಥರನ್ನು ಮತ್ತೆ ಮುಳುಗಡೆ ಮಾಡುವ ಹುನ್ನಾರವನ್ನು ಬಿಜೆಪಿ ಸರ್ಕಾರ ಮತ್ತು ಅರಣ್ಯಾಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶರಾವತಿ ಮುಳುಗಡೆ ಸಂತ್ರಸ್ತರು ಅತಂತ್ರರಾಗಲು ಸೊರಬ ಹಾಗೂ ಸಾಗರ ಶಾಸಕರೇ ನೇರ ಕಾರಣರಾಗಿದ್ದಾರೆ. ಅವರು ಸರಿಯಾಗಿ ಸಂತ್ರಸ್ತರ ಪರವಾಗಿ ನಿಲ್ಲದೆ ಇರುವುದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ. ಶರಾವತಿ ಸಂತ್ರಸ್ತರ ಬುಡಕ್ಕೆ ಕೈ ಹಾಕುವ ಮೂಲಕ ಜೇನುಗೂಡಿಗೆ ಕೈ ಹಾಕಿದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಸಮಸ್ಯೆ ಪರಿಹರಿಸುವುದಾಗಿ ಹೇಳಿದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...