ಬೆಂಗಳೂರು: ಶಮನಿಸಂಗೆ ಆಕರ್ಷಿತಳಾಗಿ ನಾಪತ್ತೆಯಾಗಿದ್ದ ಯುವತಿ ಬರೋಬ್ಬರಿ 2 ತಿಂಗಳ ಬಳಿಕ ಗುಜರಾತ್ ನ ಅನಾಥಾಶ್ರಮವೊಂದರಲ್ಲಿ ಪತ್ತೆಯಾಗಿದ್ದು, ಇದೀಗ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಯುವತಿಯನ್ನು ಪೋಷಕರ ಮಡಿಲು ಸೇರಿಸಿದ್ದಾರೆ.
ಅನುಷ್ಕಾ ಎಂಬ ಯುವತಿ ಶಮನಿಸಂ (ಆತ್ಮಗಳೊಂದಿಗೆ ಮಾತನಾಡುವ ವಿದ್ಯೆ- ಪುರಾತನ ಹೀಲಿಂಗ್ ವಿಧಾನ)ಗೆ ಆಕರ್ಷಿತಳಾಗಿ ಅಕ್ಟೋಬರ್ 31ರಂದು ಬೆಂಗಳೂರಿನ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಮಗಳು ನಾಪತ್ತೆಯಾಗಿರುವ ಬಗ್ಗೆ ಹಾಗೂ ಆಕೆಗೆ ಶಮನಿಸಂ ಬಗ್ಗೆ ಆಸಕ್ತಿಯಿದ್ದು, ಅದೇ ಕಾರಣಕ್ಕೆ ಆಕೆ ಮನೆ ಬಿಟ್ಟು ಹೋಗಿದ್ದಾಗಿ ತಂದೆ-ತಾಯಿ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಲ್ಲದೇ ತಮ್ಮ ಮಗಳನ್ನು ಪತ್ತೆ ಮಾಡಲು ಸಹಾಯ ಮಾಡುವಂತೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿಯೂ ಪೋಷಕರು ಮನವಿ ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು, ಯುವತಿ ಅನುಷ್ಕಾಳ ಚಲನವಲನಗಳ ಬಗ್ಗೆ ಸಿಸಿ ಟಿವಿಯಲ್ಲಿ ಮಾಹಿತಿ ಕಲೆ ಹಾಕಿದ್ದರು. ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಯುವತಿ ಸುಳಿವು 2 ತಿಂಗಳಾದರೂ ಪತ್ತೆಯಿರಲಿಲ್ಲ.
ಇದೀಗ ಜನವರಿ 15ರಂದು ಯುವತಿ ಅನುಷ್ಕಾ ಗುಜರಾತ್ ನ ಸೂರತ್ ನಲ್ಲಿ ಇರುವ ಬಗ್ಗೆ ಪೊಲಿಸರಿಗೆ ಮಾಹಿತಿ ಲಭ್ಯವಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರಿಗೆ ಯುವತಿ ಗುಜರಾತ್ ನ ಅನಾಥಾಶ್ರಮವೊಂದರಲ್ಲಿ ಪತ್ತೆಯಾಗಿದ್ದಾಳೆ. ಯುವತಿಯನ್ನು ಬೆಂಗಳೂರಿಗೆ ಕರೆತಂದ ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ.