ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನ ಕುರಿತಂತೆ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಶಬರಿಮಲೆಯಲ್ಲಿ ಹೆಲಿಕಾಪ್ಟರ್ ಸೇವೆ ಅಥವಾ ವಿಐಪಿ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದ್ದು, ಎರಡು ರೀತಿಯ ಯಾತ್ರಿಕರನ್ನು ಸೃಷ್ಟಿಸಬೇಡಿ ಎಂದು ಹೇಳಿದೆ.
ಎನ್ ಹಾನ್ಸ್ ಏವಿಯೇಷನ್ ಎಂಬ ಕಂಪನಿ ಹೆಲಿಕಾಪ್ಟರ್ ಮೂಲಕ ವಿಐಪಿ ದರ್ಶನದ ಭರವಸೆ ನೀಡಿ ಜಾಹಿರಾತು ನೀಡಿರುವ ಕುರಿತ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಈ ಆದೇಶ ನೀಡಿದ್ದು, ಸನ್ನಿಧಿಯ ಮೆಟ್ಟಿಲು ತಲುಪಿದರೆ ಎಲ್ಲರೂ ಸಾಮಾನ್ಯ ಭಕ್ತರು ಎಂದು ಅಭಿಪ್ರಾಯಪಟ್ಟಿದೆ.
ಈ ಖಾಸಗಿ ಕಂಪನಿ ತನ್ನ ವೆಬ್ಸೈಟ್ನಲ್ಲಿ ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನ ಸೇವೆ ನೀಡುವುದಾಗಿ ಜಾಹೀರಾತು ಪ್ರಕಟಿಸಿದ್ದು, ಹೆಲಿಕಾಪ್ಟರ್ ಮೂಲಕ ನೀಲಕ್ಕಲ್ ತಲುಪುವ ಭಕ್ತರನ್ನು ಡೋಲಿಯಲ್ಲಿ ಸನ್ನಿಧಾನಕ್ಕೆ ಕರೆದೊಯ್ದು ದರ್ಶನ ನೀಡುವ ಭರವಸೆ ನೀಡಿತ್ತು. ಇದೀಗ ಹೈಕೋರ್ಟ್ ಆದೇಶದಿಂದ ವಿಐಪಿ ದರ್ಶನಕ್ಕೆ ಅವಕಾಶ ನಿರಾಕರಿಸಿದಂತಾಗಿದೆ.