ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಆರಂಭವಾಗಿದ್ದು, ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕಳೆದ ವರ್ಷ ಕೋವಿಡ್ ಕಾರಣಕ್ಕೆ ಹಲವು ನಿರ್ಬಂಧಗಳಿದ್ದು, ಈಗ ಅದೆಲ್ಲವನ್ನು ತೆರವುಗೊಳಿಸಿರುವ ಕಾರಣ ಭಕ್ತರು ತಂಡೋಪತಂಡವಾಗಿ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿರುವ ಕಾರಣ ಕೇವಲ 10 ದಿನಗಳ ಅವಧಿಯಲ್ಲಿ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಬರೋಬ್ಬರಿ 52 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಈ ಪೈಕಿ ಅರವಣ ಪ್ರಸಾದದಿಂದಲೇ 23.57 ಕೋಟಿ ರೂಪಾಯಿ ಆದಾಯ ಬಂದಿದ್ದರೆ, ಕಾಣಿಕೆಗಳಿಂದ 12.73 ಕೋಟಿ ರೂ. ಆದಾಯ ಬಂದಿದೆ.
ಇನ್ನು ವಸತಿಗೃಹ ಕಟ್ಟಡ ಬಾಡಿಗೆಯಿಂದ 48.84 ಲಕ್ಷ ರೂಪಾಯಿ ಹಾಗೂ ಅಭಿಷೇಕ ಸೇವೆಯಿಂದ 31.87 ಲಕ್ಷ ರೂಪಾಯಿ ಆದಾಯ ಬಂದಿದೆ. ಕಳೆದ ವರ್ಷ ಕೋವಿಡ್ ಕಾರಣಕ್ಕಾಗಿ ಭಕ್ತರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿದ್ದ ಕಾರಣ ವಾರ್ಷಿಕ ಆದಾಯ 9.92 ಕೋಟಿ ರೂಪಾಯಿ ಆಗಿತ್ತು ಎಂದು ಹೇಳಲಾಗಿದೆ.