ಶನಿವಾರ ಸಂಜೆ ಬೆಂಗಳೂರಿನ ವಿವಿಧೆಡೆ ಗುಡುಗು, ಮಿಂಚಿನ ಜೊತೆಗೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿದ ಪರಿಣಾಮ ಮರಗಳು ಧರೆಗುರುಳಿ ವಾಹನ ಸವಾರರು ಪರದಾಡುವಂತಾಯಿತು. ಬನಶಂಕರಿ, ಜೆಪಿ ನಗರ, ಜಯನಗರ, ಶಾಂತಿನಗರ, ಚಾಮರಾಜಪೇಟೆ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ರಿಚ್ಮಂಡ್ ರೋಡ್ ಸೇರಿದಂತೆ ಹಲವೆಡೆ ಮಳೆ ಆಗಿದೆ.
ಕಸ್ತೂರಬಾ ರಸ್ತೆಯಲ್ಲಿ ತೆರಳುತ್ತಿದ್ದ ಕಾರಿನ ಮೇಲೆ ಮರ ಒಂದು ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಅಲ್ಲದೆ ಭಾರಿ ಮಳೆಯ ಪರಿಣಾಮ ಕೆಲವೆಡೆ ರಸ್ತೆಗಳು ಕೆರೆಯಂತಾಗಿದ್ದು, ದ್ವಿಚಕ್ರ ವಾಹನ ಸವಾರರು ಸಂಚರಿಸಲು ಪರದಾಟ ನಡೆಸಿದ್ದಾರೆ.
ಶನಿವಾರದಂದು ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಎಂಟು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಮಧ್ಯಾಹ್ನ ಮಳೆ ಆಗದ ಕಾರಣ ಕಾರ್ಯಕ್ರಮ ಸುಗಮವಾಗಿ ನಡೆದಿದೆ. ಆದರೆ ಸಂಜೆ ಈ ಭಾಗದಲ್ಲಿ ಸುರಿದ ಮಳೆಗೆ ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿ ಹೋಗಿವೆ.