
ಬೆಳಗಾವಿ: ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾದ ಬಳಿಕ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ದೇವಸ್ಥಾನಗಳ ಹುಂಡಿಯಲ್ಲಿ ಅಪಾರ ಕಾಣಿಕೆ ಸಂಗ್ರಹವಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೂ ಭಕ್ತ ಸಾಗರವೇ ಹರಿದು ಬರುತ್ತಿದ್ದು, ದೇವಸ್ಥಾನದ ಹುಂಡಿಯಲ್ಲಿ ಕೋಟ್ಯಂತರ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ರೇಣುಕಾ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, ಮೇ 17ರಿಂದ ಜೂನ್ 30ರ ಅವಧಿಯಲ್ಲಿ ಅಂದರೆ ಕೇವಲ 45 ದಿನಗಳಲ್ಲಿ ದೇವಸ್ಥಾನದಲ್ಲಿ 1.37 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
1 ಕೋಟಿ 30 ಲಕ್ಷದ 42 ಸಾವಿರ ರೂಪಾಯಿ ನಗದು, 4.44 ಲಕ್ಷ ಮೌಲ್ಯದ ಚಿನ್ನ ಹಾಗೂ 2.29 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಹುಂಡಿಯಲ್ಲಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಮೈಸೂರು ಜಿಲ್ಲೆಯ ನಂಜನಗೂಡು ನಂಜುಂಡೇಶ್ವರ ಸ್ವಾಮಿ ದೇಗುಲದಲ್ಲಿ 1.77 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಒಂದೇ ತಿಂಗಳಲ್ಲಿ 1,77,08,710 ರೂ. ನಗದು, 65 ಗ್ರಾಂ ಚಿನ್ನ, 3.5 ಕೆಜಿ ಬೆಳ್ಳಿ, 64 ವಿದೇಶಿ ಕರೆನ್ಸಿ ಸಂಗ್ರಹವಾಗಿದೆ.