ಹುಬ್ಬಳ್ಳಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಆಟೋ ಚಾಲಕರಿಗೆ ಭಾರಿ ಹೊಡೆತ ಬಿದ್ದಿದೆ. ಇನ್ನು ಖಾಸಗಿ ಬಸ್ ಗಳಂತೂ ಕೇಳುವವರೇ ಇಲ್ಲ ಎಂಬಂತಾಗಿದೆ. ಮಾತ್ರವಲ್ಲ ಶಕ್ತಿ ಯೋಜನೆಯಿಂದಾಗಿ ರೈಲ್ವೆ ಇಲಾಖೆ ಮೇಲೂ ಪರಿಣಾಮ ಬಿದ್ದಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೌದು. ಶಕ್ತಿ ಯೋಜನೆಯಿಂದಾಗಿ ರೈಲ್ವೆ ಇಲಾಖೆಗೆ ನಿಶ್ಯಕ್ತಿಯಾಗಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣದಿಂದಾಗಿ ರೈಲ್ವೆ ಇಲಾಖೆಗೂ ಹೊಡೆತ ಬಿದ್ದಿದೆ. ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕಡಿಮೆಯಾಗಿದೆ.
ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.20ರಷ್ಟು ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಕ್ತಿ ಯೋಜನೆ ಜಾರಿಗೆ ಬಂದು ಒಂದು ತಿಂಗಳಾಗಿದೆ. ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ನೈರುತ್ಯ ರೈಲ್ವೆಯಲ್ಲಿ ಪ್ರಯಾಣಿಕರ ಸಂಖ್ಯೆ ಶೇ.10-20ರಷ್ಟು ಇಳಿಮುಖವಾಗಿದೆ ಎಂದು ನೈಋತ್ಯ ರೈಲ್ವೆ ಅದಿಕಾರಿಗಳು ತಿಳಿಸಿದ್ದಾರೆ.
ಉಚಿತ ಬಸ್ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರು ರೈಲು ಬಿಟ್ಟು ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ರೈಲ್ವೆ ಇಲಾಖೆ ಮೇಲೂ ಪ್ರರಿಣಾಮ ಬೀರುತ್ತಿದೆ. ಅಷ್ಟೇ ಅಲ್ಲ ಖಾಸಗಿ ವಾಹನಗಳು, ಆಟೋ ಸೇವೆಗೆ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. ರೈಲ್ವೆ ಅಧಿಕಾರಿಗಳು ನಡೆಸಿದ ಕೇವಲ 10 ದಿನದ ಸರ್ವೆಯಲ್ಲಿ ಶೇ.10-20ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದು ಕಂಡುಬಂದಿದೆ ಎಂದು ರೈಲ್ವೆ ವಿಭಾಗದ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.