ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಈ ಭೇಟಿ ಸಂದರ್ಭದಲ್ಲಿ ಜಮ್ಮುವಿನ ವೈಷ್ಣೋ ದೇವಿ ಮಂದಿರಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಕುತೂಹಲಕರ ಸಂಗತಿಯೆಂದರೆ ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಹುಲ್ ಗಾಂಧಿಯವರ ಜಮ್ಮು ಕಾಶ್ಮೀರದ ಎರಡನೇ ಭೇಟಿ ಇದಾಗಿದೆ.
ಗುರುವಾರದಂದು ವೈಷ್ಣೋ ದೇವಿ ಮಂದಿರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿಯವರು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಮೂರು ನಿಯಮಗಳನ್ನು ಸಮೀಕರಿಸಿ ಮಾತನಾಡಿದ್ದಾರೆ.
ನಾನು ಗುರುವಾರ ಮಾತಾ ವೈಷ್ಣೋ ದೇವಿ ಮಂದಿರಕ್ಕೆ ಭೇಟಿ ನೀಡಿದ್ದೆ. ಅಲ್ಲಿ ದುರ್ಗಾ ಮಾತೆ, ಸರಸ್ವತಿ ಮಾತೆ ಹಾಗೂ ಲಕ್ಷ್ಮೀ ಮಾತೆ ಶಕ್ತಿಯ ಪ್ರತೀಕಗಳನ್ನು ಪ್ರತಿಬಿಂಬಿಸುತ್ತಿದ್ದು, ಆದರೆ ಈಗ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಇದೆಲ್ಲದಕ್ಕೂ ತಿಲಾಂಜಲಿ ನೀಡಿದೆ ಎಂದಿದ್ದಾರೆ.
ಇದಕ್ಕೆ ಉದಾಹರಣೆಯಾಗಿ ನೋಟು ನಿಷೇಧ ಕಾನೂನು, ಜಿ.ಎಸ್.ಟಿ. ಕಾನೂನು ಹಾಗೂ ರೈತರ ಕೃಷಿ ಕಾಯ್ದೆಯನ್ನು ಪ್ರಸ್ತಾಪಿಸಿದ್ದು, ಇವುಗಳನ್ನು ಹಿಂದೂಗಳ ಶಕ್ತಿ ದೇವತೆಗಳಿಗೆ ಸಮೀಕರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಆರ್.ಎಸ್.ಎಸ್. ನಿಯಂತ್ರಣ ಮಾಡುತ್ತಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ದೇಶದ ಶೈಕ್ಷಣಿಕ ವ್ಯವಸ್ಥೆಯನ್ನು ತಿರುಚಲು ಆರ್.ಎಸ್.ಎಸ್. ಮುಂದಾಗಿದೆ. ಹೀಗಾಗಿಯೇ ಶೈಕ್ಷಣಿಕ ಪಠ್ಯಗಳಲ್ಲಿ ಬದಲಾವಣೆ ತರಲು ಸಿದ್ದತೆ ನಡೆಸಿದೆ. ಇದನ್ನು ನಾವೆಲ್ಲರೂ ವಿರೋಧಿಸಬೇಕಿದೆ ಎಂದಿದ್ದಾರೆ.
ಅಂದ ಹಾಗೇ ರಾಹುಲ್ ಗಾಂಧಿ ತಮ್ಮ ಎರಡು ದಿನಗಳ ಕಾಲದ ಜಮ್ಮು ಕಾಶ್ಮೀರ ಭೇಟಿ ಸಂದರ್ಭದಲ್ಲಿ ಜಮ್ಮುವಿನ ವೈಷ್ಣೋದೇವಿ ಮಂದಿರಕ್ಕೆ ಹೋಗಲು 13 ಕಿ.ಮೀ. ಬರಿಗಾಲಿನಲ್ಲಿ ನಡೆದಿದ್ದರು.