ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಶಂಕಿತ ಉಗ್ರ ಶಾರಿಕ್ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ. ಆತನಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ತೆಗೆಯಲಾಗಿದ್ದು, ದೇಹದಲ್ಲಿ ಹೊಗೆ ತುಂಬಿಕೊಂಡ ಕಾರಣ ಇನ್ಫೆಕ್ಷನ್ ನಿಂದ ಬಳಲುತ್ತಿದ್ದು, ಹಾಗಾಗಿ ಪೊಲೀಸರ ವಿಚಾರಣೆ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಇದರ ಮಧ್ಯೆ ಶಾರಿಕ್ ನನ್ನು ಹತ್ಯೆ ಮಾಡಲು ಕರಾವಳಿಯಲ್ಲಿ ಸಕ್ರಿಯವಾಗಿರುವ ಉಗ್ರರ ಸ್ಲೀಪರ್ ಸೆಲ್ ಗಳು ಪ್ರಯತ್ನಿಸಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಆತನನ್ನು ಇರಿಸಲಾಗಿರುವ ವಾರ್ಡ್ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಓರ್ವ ಎಸ್ಐ ಹಾಗೂ ಇಬ್ಬರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು ಅಲ್ಲದೆ ಕೊಠಡಿ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ.
ಶಾರಿಕ್ ಚೇತರಿಸಿಕೊಂಡ ಬಳಿಕ ಉಗ್ರ ಚಟುವಟಿಕೆಗಳ ಕುರಿತು ಮತ್ತಷ್ಟು ಮಾಹಿತಿಗಳು ಬಹಿರಂಗವಾಗಲಿದ್ದು, ವೈದ್ಯರ ಸಮ್ಮತಿ ಬಳಿಕ ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಸುಟ್ಟ ಗಾಯಗಳಿಂದ ಶಾರಿಕ್ ಗೆ ಸೋಂಕು ತಗುಲಿರುವ ಕಾರಣ ವಾರ್ಡಿನೊಳಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಹೊರತುಪಡಿಸಿ ಮತ್ಯಾರಿಗೂ ಪ್ರವೇಶ ನೀಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.