ವಿವಾಹಪೂರ್ವ ಲೈಂಗಿಕತೆಯಿಂದ ದೂರವಿರಬೇಕೆಂದು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಪ್ರತಿಪಾದಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕ್ಯಾಟೆಚುಮೆನಲ್ ಇಟಿನರರೀಸ್ ಎಂಬ ಶೀರ್ಷಿಕೆಯಡಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ 97 ಪುಟಗಳ ಡಾಕ್ಯುಮೆಂಟ್ ರೋಮನ್ ಕ್ಯಾಥೋಲಿಕರ ನಡುವಿನ ಪ್ರಣಯ ಸಂಬಂಧಗಳ ಬಗ್ಗೆ ವಿವರವಾದ ಸಲಹೆ ಹೊಂದಿದೆ.
ಇದರಲ್ಲಿ ವಿವಾಹದ ಮೊದಲು ಲೈಂಗಿಕತೆ ಹೊಂದಿರಬಾರದು ಎಂದು ಪೋಪ್ ದಂಪತಿಗಳಿಗೆ ಸೂಚಿಸಿದ್ದಾರೆ. ಮಾರ್ಗಸೂಚಿಗಳಿಗೆ ಮುನ್ನುಡಿಯನ್ನು ಪೋಪ್ ಸ್ವತಃ ಬರೆದಿದ್ದಾರೆ.
ಆದರೆ, ಪೋಪ್ ಫ್ರಾನ್ಸಿಸ್ ಹೊರಡಿಸಿದ ವೈವಾಹಿಕ ಜೀವನದ ಹೊಸ ಮಾರ್ಗದರ್ಶಿಯು ಟೀಕೆಗೆ ಗುರಿಯಾಗಿದೆ. ಫಾದರ್ ಆಲ್ಬರ್ಟೊ ಮ್ಯಾಗಿ ಹೇಳಿಕೆ ನೀಡಿ ಇಂತಹ ದಾಖಲೆಗಳು ಒಂದು ಹೆಜ್ಜೆ ಹಿಂದಿಟ್ಟಂತೆ ಎಂದಿದ್ದಾರೆ.
ಇಟಾಲಿಯನ್ ವಿಟೊ ಮಂಕುಸೊ ಪ್ರಕಾರ, ಲೈಂಗಿಕತೆಯು ಮುಖ್ಯ. ಏಕೆಂದರೆ ಇದು ಮದುವೆಗೆ ಬದ್ಧರಾಗುವ ಮೊದಲು ದಂಪತಿ ಪರಸ್ಪರ ತಿಳಿದುಕೊಳ್ಳುವ ಮಾರ್ಗ ಒದಗಿಸುತ್ತದೆ.