ಮನುಷ್ಯನೆಂದ ಮೇಲೆ ಆಸೆ, ಆಕಾಂಕ್ಷೆಗಳು ಸಹಜವಾಗಿರುತ್ತವೆ. ಆಸೆಯನ್ನು ಈಡೇರಿಸಿಕೊಳ್ಳುವ ಭರದಲ್ಲಿ ಅಡ್ಡ ದಾರಿ ಹಿಡಿಯಬಾರದು. ಗುರಿಯನ್ನು ತಲುಪಲು ಸರಿಯಾದ ಮಾರ್ಗ ಮುಖ್ಯ. ಗುರು, ಹಿರಿಯರ ಮಾರ್ಗದರ್ಶನ ಕೂಡ ಅವಶ್ಯಕ.
ವ್ಯಕ್ತಿ ಎಂದ ಮೇಲೆ ವ್ಯಕ್ತಿತ್ವ ಕೂಡ ಮುಖ್ಯವಾಗುತ್ತದೆ. ಜನ ನಿಮ್ಮ ವ್ಯಕ್ತಿತ್ವವನ್ನು ಗಮನಿಸುತ್ತಾರೆ. ವ್ಯಕ್ತಿಯಾಗಿ ಸರಳತೆ ರೂಢಿಸಿಕೊಂಡರೆ ಒಳ್ಳೆಯದು ಎನ್ನುವುದು ತಿಳಿದವರ ಅಭಿಪ್ರಾಯವಾಗಿದೆ.
ಸರಳತೆ ಮೈಗೂಡಿಸಿಕೊಂಡ ವ್ಯಕ್ತಿ ಎಷ್ಟೇ ಎತ್ತರಕ್ಕೆ ಹೋದರೂ, ಬಂಧು –ಬಾಂಧವರಿಂದ ದೂರವಾಗದೇ ಎಲ್ಲರೊಂದಿಗೆ ಬೆರೆಯುತ್ತಾನೆ. ಸರಳತೆ ಇಲ್ಲದ ವ್ಯಕ್ತಿ ಏನೇ ಸಾಧನೆ ಮಾಡಿದರೂ ಅದು ಲೆಕ್ಕಕ್ಕಿಲ್ಲದಂತಾಗುತ್ತದೆ. ಸರಳತೆಯಲ್ಲಿ ಅನೇಕ ಮಹನೀಯರು ಮಾದರಿಯಾಗಿದ್ದಾರೆ. ಉನ್ನತ ಹುದ್ದೆಗೇರಿದವರು, ಸಾಧಕರು, ಶ್ರೀಮಂತರಾದವರು, ಸೂಪರ್ ಸ್ಟಾರ್ ಗಳಾದವರು ಕೂಡ ತಮ್ಮ ಸರಳ ವ್ಯಕ್ತಿತ್ವದಿಂದಲೇ ಮಾದರಿಯಾಗಿದ್ದಾರೆ.
ದುರಹಂಕಾರ ರೂಢಿಸಿಕೊಂಡಲ್ಲಿ ವ್ಯಕ್ತಿತ್ವಕ್ಕೆ ಹಿನ್ನಡೆಯಾಗುತ್ತದೆ. ಹತ್ತಿರದವರೂ ಕೂಡ ದೂರವಾಗುತ್ತಾರೆ. ನೀವು ಏನೇ ಸಾಧಿಸಿದರೂ ಅದು ಲೆಕ್ಕಕ್ಕೆ ಇಲ್ಲದಂತಾಗುತ್ತದೆ.
ಸರಳತೆ ನಿಮ್ಮ ವ್ಯಕ್ತಿತ್ವದ ಘನತೆಯನ್ನು ಹೆಚ್ಚಿಸುತ್ತದೆ. ಸರಳತೆಯೇ ನಿಮಗೆ ಖುಷಿ ಕೊಡುತ್ತದೆ. ಎಲ್ಲರೂ ಹತ್ತಿರವಾಗುತ್ತಾರೆ.