ಪತಿ-ಪತ್ನಿ ನಡುವೆ ಏರ್ಪಡುವ ವೈವಾಹಿಕ ವಿವಾದಗಳು ಇತ್ಯರ್ಥಗೊಂಡರೆ ದಂಪತಿ ನಡುವಣ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಕ್ಷಿದಾರರ ನಡುವಣ ಸೌಹಾರ್ದಯುತ ಒಪ್ಪಂದದ ಹಿನ್ನೆಲೆಯಲ್ಲಿ ಮಹಿಳೆಯ ಮಾಜಿ ಪತಿ ವಿರುದ್ಧ ಬಾಕಿ ಉಳಿದಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ.
2003ರ ತೀರ್ಪನ್ನು ಅವಲಂಬಿಸಿ, ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು ಮಾಜಿ ಪತಿ ವಿರುದ್ಧ ಭಾರತೀಯ ದಂಡ ಸಂಹಿತೆಯ 498A, 427, 504, ಮತ್ತು 506 ಸೆಕ್ಷನ್‌ಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣಗಳನ್ನು ರದ್ದುಗೊಳಿಸಿದೆ. ಭಾರತದ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯ ಈ ತೀರ್ಮಾನ ಕೈಗೊಂಡಿದೆ. “ಕಕ್ಷಿದಾರರು ವಿವಾದಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತೃಪ್ತಿಯಾಗಿದ್ದರೆ, ನ್ಯಾಯದ ಅಂತ್ಯವನ್ನು ಭದ್ರಪಡಿಸುವ ಉದ್ದೇಶಕ್ಕಾಗಿ ಕ್ರಿಮಿನಲ್ ಮೊಕದ್ದಮೆಗಳನ್ನು ಭಾರತದ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಅಧಿಕಾರ ಚಲಾಯಿಸುವ ಮೂಲಕ ರದ್ದುಗೊಳಿಸಬಹುದು.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973 ರ ಸೆಕ್ಷನ್ 482ರ ಅಡಿಯಲ್ಲಿ ಈ ಪ್ರಕ್ರಿಯೆ ನಡೆದಿದೆ ಎಂದು ನ್ಯಾಯಮೂರ್ತಿ ಎಂ.ಎಂ. ಸುಂದ್ರೇಶ್ ಅವರನ್ನೊಳಗೊಂಡ ಪೀಠ ವಿವರಿಸಿದೆ. ಕಕ್ಷಿದಾರರು ತಮ್ಮ ವಿವಾದಗಳನ್ನು ಬಗೆಹರಿಸಿಕೊಂಡಿದ್ದಾರೆ. ಇತ್ಯರ್ಥ ಒಪ್ಪಂದಕ್ಕೆ ಬಂದಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. 2012 ರಲ್ಲಿ ಪರಸ್ಪರ ವಿಚ್ಛೇದನದ ತೀರ್ಪು ನೀಡಲಾಗಿತ್ತು. ಬಳಿಕ ಆತ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದ. ಆದರೆ ಹೈಕೋರ್ಟ್ ಆ ಮನವಿಯನ್ನು ತಿರಸ್ಕರಿಸಿತ್ತು.
ಕಕ್ಷಿದಾರರ ನಡುವಿನ ಇತ್ಯರ್ಥದ ಹೊರತಾಗಿಯೂ ಇದನ್ನು ಮಾಡಲಾಗಿದೆ ಎಂಬುದನ್ನು ಕೂಡ ಸುಪ್ರೀಂ ಕೋರ್ಟ್ ಗಮನಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಮಹಿಳೆ ಈಗಾಗಲೇ ಮರು ಮದುವೆಯಾಗಿದ್ದಾರೆ. ಮಾಜಿ ಪತಿ ಗಡಿ ಭದ್ರತಾ ಪಡೆಯಲ್ಲಿ ಅಧಿಕಾರಿಯಾಗಿದ್ದಾರೆ, ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುವ ಬೇಡಿಕೆಯ ಉದ್ಯೋಗ ಇದು. ಹಾಗಾಗಿ ಅವರ ವಿರುದ್ಧ ಬಾಕಿ ಉಳಿದಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲಾಯಿತು.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಮುಂದುವರಿಕೆಯಿಂದ ಯಾವುದೇ ಉಪಯುಕ್ತ ಉದ್ದೇಶವನ್ನು ಪೂರೈಸಲಾಗುವುದು ಎಂದು ನಾವು ಭಾವಿಸುವುದಿಲ್ಲ. ಗಡಿ ಭದ್ರತಾ ಪಡೆಯಲ್ಲಿ ಅಧಿಕಾರಿಯಾಗಿರುವ ಮತ್ತು ಕೆಲಸದ ಅವಶ್ಯಕತೆಗೆ ಅನುಗುಣವಾಗಿ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಬೇಕಾದ ಮೇಲ್ಮನವಿದಾರರಿಗೆ ಕಿರುಕುಳ ನೀಡಬಾರದೆಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.