ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಪುತ್ರಿ ಖತೀಜಾ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಅಡಿಯೋ ಇಂಜಿನಿಯರ್ ರಿಯಾಸಿದ್ದೀನ್ ಶೇಖ್ ಮೊಹಮ್ಮದ್ ಅವರ ಜೊತೆ ಖತೀಜಾ ವಿವಾಹವಾಗಿದ್ದು, ಎ.ಆರ್. ರೆಹಮಾನ್ ನಿಖಾ ಸಮಾರಂಭದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಎ.ಆರ್. ರೆಹಮಾನ್ ಹಂಚಿಕೊಂಡ ಕುಟುಂಬ ಸದಸ್ಯರ ಫೋಟೋದಲ್ಲಿ ನವ ದಂಪತಿ ಜೊತೆ ರೆಹಮಾನ್, ಅವರ ಪತ್ನಿ ಸಾಹಿರಾ ಬಾನು, ಪುತ್ರ ಅಮೀನ್ ಹಾಗೂ ಪುತ್ರಿ ರಹೀಮಾ ಇದ್ದಾರೆ. ಪಕ್ಕದಲ್ಲಿಯೇ ರೆಹಮಾನ್ ಅವರ ತಾಯಿಯವರ ದೊಡ್ಡ ಫೋಟೋವೊಂದನ್ನು ಇಡಲಾಗಿದ್ದು, ಈ ಮೂಲಕ ಖತೀಜಾ ಹಾಗೂ ರಿಯಾಸಿದ್ದೀನ್ ಅವರ ಮೇಲೆ ತಾಯಿಯ ಆಶೀರ್ವಾದವನ್ನು ರೆಹಮಾನ್ ಕೋರಿದ್ದಾರೆ.
ಕಳೆದ ವರ್ಷದ ಡಿಸೆಂಬರ್ ನಲ್ಲಿ ಖತೀಜಾ, ರಿಯಾಸಿದ್ದೀನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಲ್ಲದೇ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಈ ಜೋಡಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದು, ಚಿತ್ರರಂಗದ ಗಣ್ಯರು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.