ವಿಜ್ಞಾನ ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸಿದೆ. ಇದಕ್ಕೆ ಬಹುದೊಡ್ಡ ಉದಾಹರಣೆ ವೈದ್ಯಕೀಯ ವಲಯದಲ್ಲಿನ ರೋಬೋಟಿಕ್ ಸರ್ಜರಿ. ರೋಬೋಟಿಕ್ ಸರ್ಜರಿ ಬಳಕೆ ಸಾಕಷ್ಟು ಹೆಚ್ಚಾಗಿದ್ದು ಅದರ ಸಹಾಯದಿಂದ ಈಗ ಅತ್ಯಂತ ಕ್ಲಿಷ್ಟಕರ ಆಪರೇಷನ್‌ಗಳು ನಡೆಯುತ್ತಿವೆ. ರೋಬೋಟ್ ಸಹಾಯದಿಂದ ಸ್ವೀಡನ್ ಮಹಿಳೆಗೆ ಗರ್ಭಾಶಯವನ್ನು ಕಸಿ ಮಾಡಲಾಗಿದೆ. ರೋಬೋಟ್ ಮೂಲಕ ಗರ್ಭಾಶಯ ಕಸಿ ನಂತರ ಮಹಿಳೆ ಗರ್ಭಿಣಿಯಾಗಿದ್ದು, ಆಕೆಯೀಗ ಮಗುವಿಗೆ ಜನ್ಮ ನೀಡಿದ್ದಾರೆ.
ಸಿ ಸೆಕ್ಷನ್ ಮೂಲಕ ಮಹಿಳೆಗೆ ಹೆರಿಗೆಯಾಗಿದೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಮಗು 3.1 ಕೆಜಿ ತೂಕವಿದೆ. ತಾಯಿಗೆ ಈಗ 35 ವರ್ಷ. ಮಗುವನ್ನು ಹೊಂದಲು ಬಯಸುವ ಸಾವಿರಾರು ಮಹಿಳೆಯರ ಪಾಲಿಗೆ ಇದೊಂದು ಆಶಾದಾಯಕ ಆವಿಷ್ಕಾರ. ಆಕೆಗೆ 2021ರ ಅಕ್ಟೋಬರ್‌ನಲ್ಲಿ ರೋಬೋಟ್ ಮೂಲಕ ಗರ್ಭಾಶಯವನ್ನು ಕಸಿ ಮಾಡಲಾಗಿತ್ತು. ನಂತರ ಮಹಿಳೆಯ ಸಂತಾನೋತ್ಪತ್ತಿ ಸಾಮರ್ಥ್ಯ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ಮಾಡಲಾಯಿತು. ಬಳಿಕ ಮಹಿಳೆ ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಿಣಿಯಾಗಿದ್ದಾಳೆ.
ಗರ್ಭಾವಸ್ಥೆಯ ಉದ್ದಕ್ಕೂ ಆಕೆ ಆರೋಗ್ಯವಾಗಿಯೇ ಇದ್ದಳು. 38 ವಾರಗಳ ನಂತರ ಆಕೆಗೆ ಸಿಸೇರಿಯನ್ ಮಾಡಲಾಯ್ತು. ಸ್ವೀಡನ್‌ನ ಈ ಮಹಿಳೆ ಗರ್ಭಾಶಯದ ಕಸಿ ನಂತರ ಮಗುವಿಗೆ ಜನ್ಮ ನೀಡಿದ 14ನೇ ಮಹಿಳೆ ಎನಿಸಿಕೊಂಡಿದ್ದಾರೆ. ಈ ರೋಬೋಟ್ ಯೋಜನೆಯ ಮೂಲಕ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಗರ್ಭಕೋಶ ಕಸಿ ಮತ್ತು ಗರ್ಭಧಾರಣೆಯನ್ನು ನಿರೀಕ್ಷಿಸಲಾಗಿದೆ ಎಂದು ವೈದ್ಯರು ಹೇಳುತ್ತಾರೆ.
ಗರ್ಭಕೋಶ ಕಸಿ ನಡೆದಿದ್ದು ಹೀಗೆ…….
ದೇಹದ ಮೇಲೆ ಯಾವುದೇ ದೊಡ್ಡ ಗಾಯವಿಲ್ಲದೆ ಮಾಡಬಹುದಾದ ಶಸ್ತ್ರಚಿಕಿತ್ಸೆ ಇದು. ಇದರಲ್ಲಿ ಹೆಚ್ಚು ರಕ್ತ ಹಾನಿಯಾಗುವುದಿಲ್ಲ. ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ದಾನಿಗಳಿಗೆ ಈ ವಿಧಾನವು ಕಡಿಮೆ ಆಕ್ರಮಣಕಾರಿಯಾಗಿದೆ. ಮಹಿಳೆ ಗರ್ಭಾಶಯವನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಅದೇ ರೀತಿ ಇರುತ್ತದೆ. ಸಣ್ಣ ಛೇದನದ ಮೂಲಕ, ಗರ್ಭಾಶಯವನ್ನು ಮಹಿಳೆಯ ಸೊಂಟಕ್ಕೆ ಸೇರಿಸಲಾಯಿತು. ಮೊದಲು ಅದನ್ನು ರಕ್ತನಾಳಗಳಿಂದ ಹೊಲಿಯಲಾಯಿತು, ನಂತರ ಯೋನಿ ಮತ್ತು ಪೋಷಕ ಅಂಗಾಂಶದಿಂದ ಹೊಲಿಯಲಾಯಿತು. ಈ ಎಲ್ಲಾ ಹಂತಗಳಿಗೆ ರೋಬೋಟಿಕ್ ಸರ್ಜರಿ ಸಹಾಯ ಮಾಡಿದೆ.