ಮಹಾರಾಷ್ಟ್ರದ ಪುಣೆಯಲ್ಲಿ ಪವಾಡವೇ ನಡೆದಿದೆ. ಕೇವಲ 6 ತಿಂಗಳಿಗೇ ಜನಿಸಿದ ಮಗುವೊಂದು ಬದುಕಿ ಉಳಿದಿದೆ. 24 ವಾರಗಳಿಗೇ ಜನಿಸಿದ ಈ ಹೆಣ್ಣು ಮಗುವಿನ ತೂಕ ಕೇವಲ 400 ಗ್ರಾಂನಷ್ಟಿತ್ತು. ಈ ಸ್ಥಿತಿಯಲ್ಲಿ ಹುಟ್ಟಿದ ಮಕ್ಕಳು ಬದುಕುಳಿಯುವ ಸಾಧ್ಯತೆಗಳು ಬಹಳ ಕಡಿಮೆ. ಆದರೆ ಈ ಹೆಣ್ಣು ಮಗು ಸಂಪೂರ್ಣ ಆರೋಗ್ಯವಾಗಿದೆ. ಕೇವಲ 6 ತಿಂಗಳಿಗೆ ಜನಿಸಿ, ಬದುಕಿ ಉಳಿದಿರೋ ಮಗುವಿನ ಹೆಸರು ದಾಖಲೆಯ ಪುಸ್ತಕ ಸೇರಿದೆ. ಶಿವನ್ಯಾ ಎಂಬ ಈ ಮಗು ಪುಣೆಯ ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ಜನಿಸಿದೆ.
ಇದು ಅಕಾಲಿಕ ಹೆರಿಗೆಯಾಗಿತ್ತು, ಸಮಯಕ್ಕಿಂತ ಮುಂಚೆಯೇ ಸಂಭವಿಸಿತ್ತು. ಆದರೆ ಈಗ ಮಗು ಸಂಪೂರ್ಣ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾಳೆ. ಈ ಅವಧಿಪೂರ್ವ ಹೆಣ್ಣು ಮಗು 2022ರ ಮೇ ತಿಂಗಳಿನಲ್ಲಿ ಜನಿಸಿದೆ. ತೂಕ ತುಂಬಾ ಕಡಿಮೆಯಿದ್ದ ಕಾರಣ ತಕ್ಷಣಕ್ಕೆ ಹೆರಿಗೆ ಬಳಿಕ ತಾಯಿ ಮಗುವನ್ನು ಮನೆಗೆ ಕರೆತರಲು ಸಾಧ್ಯವಾಗಲಿಲ್ಲ. ವೈದ್ಯರ ಮೇಲ್ವಿಚಾರಣೆಯಲ್ಲಿಯೇ ಸುಮಾರು 3 ತಿಂಗಳುಗಳ ಕಾಲ ಮಗುವನ್ನು ಆಸ್ಪತ್ರೆಯಲ್ಲಿ ಇಡಲಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಶಿವನ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾಳೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆಗೆ ಹೆಣ್ಣು ಮಗುವಿನ ತೂಕ 2 ಕೆಜಿ 130 ಗ್ರಾಂನಷ್ಟಾಗಿತ್ತು. ಈಗ 4.5 ಕೆಜಿಗೆ ಏರಿಕೆಯಾಗಿದೆ.
ಮಗು ಈಗ ಚೆನ್ನಾಗಿ ಆಹಾರ ಸೇವನೆ ಮಾಡಲು ಸಮರ್ಥವಾಗಿದೆ. ವೈದ್ಯರ ಪ್ರಕಾರ ಸಾಮಾನ್ಯವಾಗಿ ಗರ್ಭಧಾರಣೆಯ 40 ವಾರಗಳ ನಂತರ ಜನಿಸಿದ ಮಕ್ಕಳ ತೂಕವು ಸುಮಾರು 2.5 ಕೆ.ಜಿ. ಇರುತ್ತವೆ. ಆದರೆ ಶಿವನ್ಯಾ ಪ್ರಕರಣವು ಭಾರತದಲ್ಲೇ ಮೊದಲು. ಏಕೆಂದರೆ 6 ತಿಂಗಳಲ್ಲಿ ಜನಿಸಿದ ಮಗು ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ. ಶಿವನ್ಯಾಳ ತಾಯಿ ಎರಡು ಗರ್ಭಾಶಯವನ್ನು ಹೊಂದಿದ್ದರಿಂದ ಈ ಪ್ರಕರಣವು ತುಂಬಾ ಜಟಿಲವಾಗಿತ್ತು. ಆದರೆ ವೈದ್ಯರು ಇದನ್ನು ಸಮರ್ಥವಾಗಿ ನಿಭಾಯಿಸಿದ್ದು, ಕೇವಲ 400 ಗ್ರಾಂ ತೂಕವಿದ್ದ ಮಗುವನ್ನು ಬದುಕಿಸಿ ಮನೆಗೆ ಕಳಿಸಿಕೊಟ್ಟಿದ್ದಾರೆ.