ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಏಳು ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಐದು ಹಂತಗಳ ಚುನಾವಣೆ ಪೂರ್ಣಗೊಂಡಿದೆ. ಇನ್ನೆರಡು ಹಂತಗಳ ಚುನಾವಣೆ ಬಾಕಿ ಉಳಿದಿದ್ದು, ಮತ ಎಣಿಕೆ ಕಾರ್ಯ ಮಾರ್ಚ್ 10ರಂದು ನಡೆಯಲಿದೆ. ಬಹುತೇಕ ಅಂದು ಸಂಜೆಯೊಳಗಾಗಿ ಫಲಿತಾಂಶ ಹೊರಬೀಳಲಿದ್ದು, ಅಧಿಕಾರದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬುದು ತಿಳಿಯಲಿದೆ.
ಬಾಕಿ ಉಳಿದಿರುವ ಎರಡು ಹಂತಗಳ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಳು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದು, ಮತದಾರರ ಮನವೊಲಿಕೆಗಾಗಿ ನಾನಾ ತಂತ್ರಗಳ ಮೊರೆ ಹೋಗುತ್ತಿದ್ದಾರೆ. ಈ ಪೈಕಿ ರಾಬರ್ಟ್ಸ್ ಗಂಜ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಭೂಪೇಶ್ ಚೌಬೆ ವಿಭಿನ್ನ ರೀತಿಯ ಪ್ರಚಾರದಿಂದಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ವೇದಿಕೆ ಮೇಲೆಯೇ ಕಿವಿ ಹಿಡಿದುಕೊಂಡು ಉಠ್ ಬೈಸ್ ಮಾಡಿ ಐದು ವರ್ಷಗಳ ಅವಧಿಯಲ್ಲಿ ತಾವೇನಾದರೂ ತಪ್ಪು ಮಾಡಿದ್ದರೆ ಅವುಗಳನ್ನು ಕ್ಷಮಿಸಿ ಮತ ನೀಡುವಂತೆ ಮನವಿ ಮಾಡಿದ್ದ ಅವರು, ಇದೀಗ ಮತಪ್ರಚಾರಕ್ಕೆ ಹೋಗುವ ವೇಳೆ ಮನೆ ಮುಂದೆ ಕುಳಿತಿದ್ದ ವೃದ್ಧರೊಬ್ಬರ ಕಾಲಿಗೆ ಮಸಾಜ್ ಮಾಡಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.