ಜಮ್ಮುವಿನಲ್ಲಿ ರಂಗ ಕಲಾವಿದನೊಬ್ಬ ವೇದಿಕೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈತನನ್ನು 21 ವರ್ಷದ ಯೋಗೇಶ್ ಗುಪ್ತಾ ಎಂದು ಗುರುತಿಸಲಾಗಿದೆ. ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈತ ಪಾರ್ವತಿ ದೇವಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ.
ಗಣೇಶ ಉತ್ಸವದಲ್ಲಿ ಯೋಗೇಶ್ ಪ್ರದರ್ಶನ ನೀಡುತ್ತಿದ್ದ. ಪ್ರದರ್ಶನದ ನಡುವೆಯೇ ಆತ ಹೃದಯಾಘಾತದಿಂದ ವೇದಿಕೆ ಮೇಲೆ ಕುಸಿದು ಬಿದ್ದಿದ್ದಾನೆ. ಆತನಿಗೆ ಹೃದಯಾಘಾತವಾಗಿದೆ ಅನ್ನೋದು ಪ್ರೇಕ್ಷಕರ ಅರಿವಿಗೇ ಬಂದಿರಲಿಲ್ಲ. ಇದು ಪ್ರದರ್ಶನದ ಒಂದು ಭಾಗ ಎಂದು ಪ್ರೇಕ್ಷಕರು ನಂಬಿದ್ದರು.
ಮೇಲಕ್ಕೆ ಏಳಲು ಸಾಕಷ್ಟು ಪ್ರಯತ್ನಪಟ್ಟರೂ ಆತನಿಂದ ಸಾಧ್ಯವಾಗಲೇ ಇಲ್ಲ. ಕೂಡಲೇ ಭಗವಾನ್ ಶಿವನ ಪಾತ್ರವನ್ನು ನಿರ್ವಹಿಸುತ್ತಿದ್ದ ನಟ ಮತ್ತು ಇತರರು ವೇದಿಕೆಗೆ ಧಾವಿಸಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆದ್ರೆ ಅಷ್ಟರಲ್ಲಾಗ್ಲೇ ಯೋಗೇಶ್ ಮೃತಪಟ್ಟಿದ್ದ.
ಕಲಾವಿದನ ಸಾವನ್ನು ಪ್ರೇಕ್ಷಕರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಂತಹ ಹೃದಯ ವಿದ್ರಾವಕ ಘಟನೆ ನಡೀತಾ ಇರೋದು ಇದೇ ಮೊದಲೇನಲ್ಲ. ಈ ಹಿಂದೆ ಬಾಲಿವುಡ್ ಗಾಯಕ ಕೆಕೆ ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ಕೊಡ್ತಿದ್ದಾಗ್ಲೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದರು. ಮೇ ತಿಂಗಳಲ್ಲಿ ಮಲಯಾಳಂ ಗಾಯಕ ಎಡವ ಬಶೀರ್ ಕೂಡ ಕೇರಳದ ಅಲಪ್ಪುಳದಲ್ಲಿ ನಡೆದ ಸಂಗೀತ ಕಛೇರಿಯೊಂದರಲ್ಲಿ ವೇದಿಕೆಯ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದರು.