ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆಜಾನ್, ಟ್ವಿಟ್ಟರ್, ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಬಹು ರಾಷ್ಟ್ರೀಯ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಇದರ ಮಧ್ಯೆ ಭಾರತೀಯ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ.
ವೇತನ ಹೆಚ್ಚಳ ಕುರಿತಂತೆ ವೃತ್ತಿಪರ ಸೇವಾ ಸಂಸ್ಥೆ ಅರ್ನ್ಸ್ಟ್ ಅಂಡ್ ಯಂಗ್ ನ ‘ಫ್ಯೂಚರ್ ಆಫ್ ಪೇ’ ವರದಿಯೊಂದನ್ನು ತಯಾರಿಸಿದ್ದು, ಇದರ ಪ್ರಕಾರ 2023ರಲ್ಲಿ ಭಾರತೀಯ ಉದ್ಯೋಗಿಗಳ ವೇತನದಲ್ಲಿ ಶೇ.10.2 ರಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ (2022 ರಲ್ಲಿ ಶೇಕಡ 10.4) ಈ ಬಾರಿ ಇದು ಕಡಿಮೆಯಾದರೂ ಸಹ ಪ್ರಸಕ್ತ ನಡೆಯುತ್ತಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಸಮಾಧಾನಕರ ಸಂಗತಿ ಎಂದು ಭಾವಿಸಲಾಗಿದೆ. ಬ್ಲೂ ಕಾಲರ್ ಉದ್ಯೋಗಿಗಳನ್ನು ಹೊರತುಪಡಿಸಿ ಇತರೆ ಉದ್ಯೋಗಿಗಳ ವೇತನದಲ್ಲಿ ಸ್ವಲ್ಪ ಇಳಿಕೆಯನ್ನು ನಿರೀಕ್ಷಿಸಲಾಗಿದೆ.
ಇ ಕಾಮರ್ಸ್ ವಲಯದಲ್ಲಿ ಅತಿ ಹೆಚ್ಚು ಅಂದರೆ ಶೇ.12.5 ವೇತನ ಹೆಚ್ಚಳವಾಗಬಹುದೆಂದು ನಿರೀಕ್ಷಿಸಲಾಗಿದ್ದು, ವೃತ್ತಿಪರ ಸೇವೆಗಳು ಶೇ.11.9 ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶೇ.10.8 ಹೆಚ್ಚಳವಾಗಲಿದೆ ಎನ್ನಲಾಗಿದೆ. ಇತರೆ ಸೇರಿದಂತೆ ಎಲ್ಲ ವಲಯಗಳನ್ನು ಪರಿಗಣಿಸಿದರೆ ವೇತನ ಹೆಚ್ಚಳ ಸರಾಸರಿ ಶೇ.10.2 ರಷ್ಟು ಇರಲಿದೆ.
ವೃತ್ತಿಪರ ಸೇವಾ ಸಂಸ್ಥೆ ಅರ್ನ್ಸ್ಟ್ ಅಂಡ್ ಯಂಗ್‌ನ ‘ಫ್ಯೂಚರ್ ಆಫ್ ಪೇ’ ಈ ವರದಿ ತಯಾರಿಗೂ ಮುನ್ನ ಡಿಸೆಂಬರ್ 2022 ರಿಂದ ಫೆಬ್ರವರಿ 2023ರ ನಡುವೆ ಕಂಪನಿಗಳ 150ಕ್ಕೂ ಅಧಿಕ ಮುಖ್ಯಸ್ಥರಿಂದ ಮಾಹಿತಿ ಪಡೆಯಲಾಗಿದೆ.
ಇನ್ನುಳಿದಂತೆ ಪ್ರಮುಖ ಕೌಶಲ್ಯ ವಲಯ ಬೇಡಿಕೆಯಲ್ಲಿದ್ದು ಮಾರುಕಟ್ಟೆಯಲ್ಲಿ ತಮ್ಮ ಪಾರುಪತ್ಯವನ್ನು ಮುಂದುವರೆಸಿದೆ ಎಂದು ವರದಿ ಬಹಿರಂಗಪಡಿಸಿದೆ. ಅಲ್ಲದೇ 2023 ರಲ್ಲಿ ಭಾರತದಲ್ಲಿ ಉದ್ಯೋಗಗಳಿಗಾಗಿ ಅತ್ಯಂತ ಭರವಸೆಯ ಉದಯೋನ್ಮುಖ ವಲಯಗಳಲ್ಲಿ ನವೀಕರಿಸಬಹುದಾದ ಇಂಧನ, ಇ-ಕಾಮರ್ಸ್, ಡಿಜಿಟಲ್ ಸೇವೆಗಳು, ಆರೋಗ್ಯ ರಕ್ಷಣೆ, ದೂರಸಂಪರ್ಕ, ಶೈಕ್ಷಣಿಕ ಸೇವೆಗಳು, ಚಿಲ್ಲರೆ ಮತ್ತು ಲಾಜಿಸ್ಟಿಕ್ಸ್ ಮತ್ತು ಹಣಕಾಸು ತಂತ್ರಜ್ಞಾನ ಬಹು ಮುಖ್ಯವಾಗಿದೆ ಎಂದೂ ಸಹ ವರದಿ ತಿಳಿಸಿದೆ.