ಕೆಲವರು ತಾವು ಉದ್ಯೋಗಕ್ಕೆ ತೆರಳದೆ, ವೇತನ ಪಡೆಯಬೇಕು ಅನ್ನೋ ಮನಸ್ಥಿತಿಯವರು ಇರುತ್ತಾರೆ. ಆದರೆ, ದುಡ್ಡೇನು ಮರದಲ್ಲಿ ಬೆಳೆಯೊಕ್ಕಾಗುತ್ತಾ..? ಹೀಗಾಗಿ ಅನಿವಾರ್ಯವಾಗಿ ಉದ್ಯೋಗಕ್ಕೆ ಹೋಗಬೇಕಾಗುತ್ತದೆ. ಆದರೆ, ಇಲ್ಲೊಬ್ಬಳು ತಾನು ಕೆಲಸಕ್ಕೆ ಹೋಗದೆ ವೇತನ ಪಡೆಯಲು ಮಾಡಿರುವ ಖತರ್ನಾಕ್ ಪ್ಲಾನ್ ಕೇಳಿದ್ರೆ ಬೆಚ್ಚಿ ಬೀಳುತ್ತೀರಾ..!
ಹೌದು, ಅಮೆರಿಕಾದ ಮಹಿಳೆಯೊಬ್ಬಳು ತಾನು ಕೆಲಸಕ್ಕೆ ಹೋಗದೆ ವೇತನ ಹೇಗೆ ಪಡೆಯುವುದು ಎಂದು ಯೋಚಿಸಿ, ಖತರ್ನಾಕ್ ಪ್ಲಾನ್ ಮಾಡಿದ್ದಾಳೆ. ಅದೇನೆಂದ್ರೆ ಸುಮ್ ಸುಮ್ಮನೆ ಗರ್ಭಿಣಿಯಾಗಿದ್ದೇನೆಂದು ತಿಳಿಸಿ, ವೇತನ ಸಹಿತ ಹೆರಿಗೆ ರಜೆ ಪಡೆಯಲು ಮುಂದಾಗಿದ್ದಾಳೆ. ಇದಕ್ಕಾಗಿ ತನ್ನ ಹೊಟ್ಟೆಗೆ ದಿಂಬು ಸುತ್ತಿಕೊಂಡು ಕಚೇರಿಗೆ ಬರುತ್ತಿದ್ದಳು. ಆದರೆ, ಆಕಸ್ಮಾತ್ ಆಗಿ ಆಕೆಯ ನಕಲಿ ಬೇಬಿ ಬಂಪ್ ದೇಹದಿಂದ ಹೊರಬಂದಿರುವುದನ್ನು ಸಹೋದ್ಯೋಗಿಗಳು ಗಮನಿಸಿದ್ದರಿಂದ ಸಿಕ್ಕಿಬಿದ್ದಿದ್ದಾಳೆ.
ಜಾರ್ಜಿಯಾ ವೊಕೇಶನಲ್ ರಿಹ್ಯಾಬಿಲಿಟೇಶನ್ ಏಜೆನ್ಸಿಯಲ್ಲಿ ವಿದೇಶಾಂಗ ವ್ಯವಹಾರಗಳ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ 43 ವರ್ಷದ ರಾಬಿನ್ ಫೋಲ್ಸಮ್, ಅಕ್ಟೋಬರ್ 2020 ರಲ್ಲಿ ತನ್ನ ಮೇಲಧಿಕಾರಿಗಳಿಗೆ ತಾನು ಗರ್ಭಿಣಿಯಾಗಿರುವುದಾಗಿ ತಿಳಿಸಿದ್ದಾಳೆ. ಹೀಗಾಗಿ ವೇತನ ಸಹಿತ ರಜೆ ಕೋರಿದ್ದಾಳೆ.
ವರ್ಷಕ್ಕೆ 100,000 ಡಾಲರ್ ಸಂಬಳ ಪಡೆಯುತ್ತಿದ್ದ ರಾಬಿನ್, ಪಾವತಿಸಿದ ರಜೆಯಲ್ಲಿ 15,000 ಡಾಲರ್ ಹಣ ಲಪಟಾಯಿಸಲು ಯೋಜಿಸಿದ್ದಳು. ಆದರೆ, ಈಕೆಯ ಹೊಟ್ಟೆಯ ಕೆಳಭಾಗವು ದೇಹದಿಂದ ಹೊರಬಂದಿದ್ದನ್ನು ಸಹೋದ್ಯೋಗಿಗಳು ಗಮನಿಸಿದ್ದು, ಅನುಮಾನಗೊಂಡಿದ್ದರು.
ಗರ್ಭಿಣಿ ಎಂದು ಸುಳ್ಳು ಹೇಳಿದ್ದಲ್ಲದೆ, ಈಕೆ ನಕಲಿ ತಂದೆಯನ್ನು ಕೂಡ ಸೃಷ್ಟಿಸಿದ್ದಳು. 2021ರ ಮೇ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ್ದಾಗಿ ತಿಳಿಸಿದ್ದರಿಂದ ಆಕೆಗೆ ಏಳು ವಾರಗಳ ವೇತನ ಸಹಿತ ರಜೆ ನೀಡಲಾಗಿದೆ. ಬಳಿಕ ಈಕೆ ಕಳುಹಿಸಿದ ಮಗುವಿನ ಚಿತ್ರ ನೋಡಿದ ಸಹೋದ್ಯೋಗಿಗಳಿಗೆ ಮತ್ತಷ್ಟು ಅನುಮಾನ ಬಂದಿದೆ.
ರಾಬಿನ್ ಹೆರಿಗೆಯಾದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳನ್ನು ತನಿಖಾಧಿಕಾರಿಗಳು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ ಆಕೆ ವೈದ್ಯಕೀಯ ವಿಮಾ ದಾಖಲೆಗಳು ಪ್ರಸವಪೂರ್ವ ಪರೀಕ್ಷೆಗಳು ಅಥವಾ ಹೆರಿಗೆಗೆ ನೀಡಲಾದ ಯಾವುದೇ ಶುಲ್ಕವನ್ನು ತೋರಿಸಲಿಲ್ಲ. ಇದೀಗ ರಾಬಿನ್ ವಿರುದ್ಧ ಸುಳ್ಳು ಹೇಳಿಕೆ, ಗುರುತರ ವಂಚನೆ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ.
ಗುರುತಿನ ವಂಚನೆಗಾಗಿ ರಾಬಿನ್ 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಮತ್ತು ಸುಳ್ಳು ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಆಕೆಗೆ ಐದು ವರ್ಷಗಳವರೆಗೆ ಶಿಕ್ಷೆ ಮತ್ತು 100,000 ಡಾಲರ್ ಮೊತ್ತ ದಂಡ ವಿಧಿಸಬಹುದು.