ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರ ನೀರಸ ಪ್ರದರ್ಶನ ಮುಂದುವರೆದಿದೆ. ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಡಕ್ ಔಟ್ ಆಗಿದ್ದಾರೆ.
ವಿರಾಟ್ ಕೊಹ್ಲಿ ಮೂರು ಪಂದ್ಯಗಳಲ್ಲಿ 8.66ಕ್ಕಿಂತ ಕಡಿಮೆ ಬ್ಯಾಟಿಂಗ್ ಸರಾಸರಿಯೊಂದಿಗೆ ಕೇವಲ 26 ರನ್ ಗಳಿಸುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಕಳಪೆ ಏಕದಿನ ಸರಣಿಯನ್ನು ಆಡಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಆಡಿದ ಕಳೆದ 5 ಪಂದ್ಯಗಳಲ್ಲಿ ಅವರು ಎರಡು ಬಾರಿ ಡಕ್‌ಔಟ್ ಆಗಿದ್ದಾರೆ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಸ್ಪಿನ್ನರ್ ಕೇಶವ್ ಮಹಾರಾಜ್ ಎದುರು ಗೋಲ್ಡನ್ ಡಕ್ ಆಗಿದ್ದರು.
ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬೌಲರ್‌ಗಳನ್ನು ಹೆಚ್ಚು ತೊಂದರೆಗೊಳಿಸದೆ ಐದು ಎಸೆತಗಳಲ್ಲಿ ಔಟಾಗಿದ್ದರು. ವಿರಾಟ್ ಕೊಹ್ಲಿ ತನ್ನ ಹೆಸರಲ್ಲಿ ಒಟ್ಟು 15 ಡಕ್ ಔಟ್ ಗಳನ್ನು ಹೊಂದಿದ್ದಾರೆ. ಇದು ಭಾರತಕ್ಕಾಗಿ ಅತಿ ಹೆಚ್ಚು ಏಕದಿನ ಅಂತರರಾಷ್ಟ್ರೀಯ ಡಕ್ ಔಟ್ ಆಗಿದೆ. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಮತ್ತು ಸೌರವ್ ಗಂಗೂಲಿ ನಂತರ ಅವರು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಮಾಜಿ ನಾಯಕ ಕೊಹ್ಲಿಯ ವೃತ್ತಿಜೀವನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಅವರ ಅತ್ಯಂತ ಕಡಿಮೆ ಸ್ಕೋರ್ ಇದಾಗಿದೆ. ಇನ್ನು ಸರಣಿಯಲ್ಲಿ ಕೊಹ್ಲಿಯ ವೈಫಲ್ಯಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಅವರ ಬೆಂಬಲಕ್ಕೆ ನಿಂತಿದ್ದಾರೆ.