ಬಿಸಿ ಬಿಸಿಯಾದ ಮೊಮೊಸ್ ತಿನ್ನುತ್ತಿದ್ದರೆ ಹೊಟ್ಟೆಯೊಳಗೆ ಹೋಗಿದ್ದೆ ತಿಳಿಯುವುದಿಲ್ಲ. ಇದನ್ನು ಮಾಡುವುದು ಕೂಡ ಅಂತದ್ದೇನೂ ಕಷ್ಟವಲ್ಲ. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
¾ ಕಪ್-ಮೈದಾ ಹಿಟ್ಟು, ನೀರು-ಅಗತ್ಯವಿರುವಷ್ಟು, ಉಪ್ಪು ರುಚಿಗೆ ತಕ್ಕಷ್ಟು, 2 ಟೀ ಸ್ಪೂನ್ ಎಣ್ಣೆ, 1 ಕಪ್-ಚಿಕ್ಕದ್ದಾಗಿ ಕತ್ತರಿಸಿಕೊಂಡ ಕ್ಯಾಬೇಜ್, ¼ ಕಪ್ ಸಣ್ಣಗೆ ಹಚ್ಚಿಟ್ಟುಕೊಂಡ ಕ್ಯಾರೆಟ್, 1 ಟೇಬಲ್ ಸ್ಪೂನ್-ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ, ¼ ಟೀ ಸ್ಪೂನ್-ಸಕ್ಕರೆ, ½ ಟೀ ಸ್ಪೂನ್-ಕಾಳುಮೆಣಸಿನ ಪುಡಿ, 1 ಟೀ ಸ್ಪೂನ್-ಸೋಯಾ ಸಾಸ್, ಉಪ್ಪು-ರುಚಿಗೆ ತಕ್ಕಷ್ಟು ,1 ಟೇಬಲ್ ಸ್ಪೂನ್-ಎಣ್ಣೆ.
ಮಾಡುವ ವಿಧಾನ:
ಒಂದು ಬೌಲ್ ಗೆ ಮೈದಾ ಹಿಟ್ಟು, ಉಪ್ಪು, 2 ಟೀ ಸ್ಪೂನ್ ಎಣ್ಣೆ, ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ಒಂದು ಕಡೆ ಇಟ್ಟುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಟೇಬಲ್ ಸ್ಪೂನ್ ಎಣ್ಣೆ, ಬೆಳ್ಳುಳ್ಳಿ ಹಾಕಿ ನಂತರ ಕತ್ತರಿಸಿಟ್ಟುಕೊಂಡ ತರಕಾರಿ, ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ, ಸೋಯಾ ಸಾಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷಗಳ ಕಾಲ ಫ್ರೈ ಮಾಡಿ ಗ್ಯಾಸ್ ಆಫ್ ಮಾಡಿ. ಮಾಡಿಟ್ಟುಕೊಂಡ ಹಿಟ್ಟಿನ ಮಿಶ್ರಣದಿಂದ ಹದ ಗಾತ್ರದ ಉಂಡೆ ಮಾಡಿಕೊಂಡು ತೆಳ್ಳಗೆ ಲಟ್ಟಿಸಿಕೊಳ್ಳಿ. ಚಿಕ್ಕ ಬೌಲ್ ನ ಸಹಾಯದಿಂದ ಅದನ್ನು ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಿ. ನಂತರ ಅದರೊಳಗೆ ಮಾಡಿಟ್ಟುಕೊಂಡ ತರಕಾರಿ ಮಿಶ್ರಣವನ್ನು ತುಂಬಿ ಮೊಮೊ ಶೇಪ್ ನಲ್ಲಿ ಮಡಚಿಕೊಂಡು ಆವಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.