ತಾನು ನೋಡಿಕೊಳ್ಳುತ್ತಿದ್ದ ವೃದ್ಧೆಯ ಕಣ್ಣಿಗೆ ಹಾರ್ಪಿಕ್ ಹಾಗೂ ಜಂಡುಬಾಮ್ ಮಿಕ್ಸ್ ಮಾಡಿ ಹಾಕುವ ಮೂಲಕ 32 ವರ್ಷದ ಕೇರ್ ಟೇಕರ್ ವೃದ್ಧೆಯ ಕಣ್ಣನ್ನು ಕುರುಡಾಗಿಸಿದ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ.
ವೃದ್ಧೆಯ ಬಳಿ ಇದ್ದ ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿದ ಆರೋಪಿ ಭಾರ್ಗವಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
73 ವರ್ಷದ ವೃದ್ಧೆ ಹೇಮಾವತಿ ಸಿಕಂದರಾಬಾದ್ನ ನಾಚರಂನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. 2001ರ ಆಗಸ್ಟ್ ತಿಂಗಳಲ್ಲಿ ಲಂಡನ್ನಲ್ಲಿ ನೆಲೆಸಿರುವ ಹೇಮಾವತಿ ಪುತ್ರ ಶಶಿಧರ್ ಹೇಮಾವತಿಯನ್ನು ನೋಡಿಕೊಳ್ಳಲು ಭಾರ್ಗವಿಯನ್ನು ನೇಮಿಸಿದರು. ಬಳಿಕ ಭಾರ್ಗವಿ ತನ್ನ ಏಳು ವರ್ಷದ ಮಗನೊಂದಿಗೆ ಹೇಮಾವತಿಯಿದ್ದ ಫ್ಲ್ಯಾಟ್ಗೆ ತೆರಳಿದರು.
ವೃದ್ಧೆಯ ಕಣ್ಣಿನಲ್ಲಿ ದೋಷವಿದೆ ಎಂಬುದನ್ನು ಅರಿತಿದ್ದ ಭಾರ್ಗವಿ ಅವರ ಕಣ್ಣಿಗೆ ಡ್ರಾಪ್ಸ್ ಹಾಕುವ ನೆಪದಲ್ಲಿ ಕಣ್ಣಿಗೆ ಹಾರ್ಪಿಕ್ ಹಾಗೂ ಜಂಡು ಬಾಮ್ ಮಿಶ್ರಣ ಮಾಡಿ ಹಾಕಿದ್ದಾರೆ. ಇದರಿಂದ ದೃಷ್ಟಿ ಇನ್ನಷ್ಟು ಮಂಜಾದ ಪರಿಣಾಮ ಹೇಮಾವತಿ ತನ್ನ ಮಗ ಶಶಿಧರನಿಗೆ ಮಾಹಿತಿ ನೀಡಿದರು, ಶಶಿಧರ್ ತಾಯಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಹೇಮಾವತಿ ಅಂಧೆಯಾಗಿದ್ದರು. ಬಳಿಕ ಶಶಿಧರ್ ತಾಯಿಯನ್ನು ಎಲ್ವಿ ಪ್ರಸಾದ್ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋದರು. ಇಲ್ಲಿ ವೈದ್ಯರು ವೃದ್ಧೆಯ ಕಣ್ಣಿಗೆ ವಿಷಕಾರಿ ವಸ್ತು ಹಾಕಲಾಗಿದೆ ಎಂದು ಮಾಹಿತಿ ನೀಡಿದರು.
ಇದಾದ ಬಳಿಕ ಭಾರ್ಗವಿ ಮೇಲೆ ಶಂಕೆ ವ್ಯಕ್ತಪಡಿಸಿದ ಕುಟುಂಬ ಆಕೆಯ ವಿರುದ್ಧ ದೂರು ನೀಡಿತು. ಪೊಲೀಸ್ ತನಿಖೆಯಲ್ಲಿ ಭಾರ್ಗವಿ ಸತ್ಯ ಬಾಯ್ಬಿಟ್ಟಿದ್ದಾಳೆ. ಆಕೆಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.