ಶಿವಮೊಗ್ಗ: ಹಿಜಾಬ್ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ವಿವಾದ ಮುಂದುವರೆದಿದ್ದು, ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಸಚಿವ ಕೆ.ಎಸ್. ಈಶ್ವರಪ್ಪ, ವೀರಶೈವ-ಲಿಂಗಾಯತ ಒಡೆದದ್ದಾಯ್ತು ಈಗ ಸ್ವಾಮೀಜಿಗಳ ಮಧ್ಯೆ ಒಡಕು ಮೂಡಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯನವರದ್ದು ಸಾಧು-ಸಂತರನ್ನು ಒಡೆಯುವ ಯತ್ನ. ಸರ್ವಸಂಗ ಪರಿತ್ಯಾಗಿಗಳನ್ನು ಸ್ವಾಮೀಜಿಗಳು ಅಂತಾರೆ. ಆದರೆ ಹಿರಿಯ ಸ್ವಾಮೀಜಿ, ಕಿರಿಯ ಸ್ವಾಮೀಜಿ ಎಂದು ಸಿದ್ದರಾಮಯ್ಯ ಒಡಕು ತರಲು ಹೊರಟಿದ್ದಾರೆ ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ನ ಒಬ್ಬ ನಾಯಕರು ಸಿದ್ದರಾಮಯ್ಯ ಪರ ಬಾಯ್ಬಿಟ್ಟಿಲ್ಲ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಕಾಂಗ್ರೆಸ್ ಸರ್ಕಾರ ಹೋಯ್ತು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನುಭವಿಸಿದ್ದಾಯ್ತು ಆದರೂ ಸಿದ್ದರಾಮಯ್ಯನವರಿಗೆ ಬುದ್ದಿಬಂದಿಲ್ಲ. ಮುಂದಿನ ಚುನಾವಣೆಯಲ್ಲಿ ನಿಲ್ಲಲು ಸಿದ್ದರಾಮಯ್ಯನವರಿಗೆ ಕ್ಷೇತ್ರಗಳೇ ಇಲ್ಲ, ಜಮೀರ್ ಅಹ್ಮದ್ ಅವರ ಚಾಮರಾಜಪೇಟೆ ಕ್ಷೇತ್ರ ಬಿಟ್ಟರೆ ಬೇರೆ ಕ್ಷೇತ್ರವಿಲ್ಲ, ಅಲ್ಲಿಂದ ಸ್ಪರ್ಧಿಸಲು ಮುಸ್ಲಿಂರನ್ನು ಓಲೈಸಲು ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.