alex Certify ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ವತಿಯಿಂದ ಐದು ಯೋಜನೆಗಳಿಗೆ ಸಾಲ ಹಾಗೂ ಸಹಾಯಧನ ಸೌಲಭ್ಯ; ಇಲ್ಲಿದೆ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ವತಿಯಿಂದ ಐದು ಯೋಜನೆಗಳಿಗೆ ಸಾಲ ಹಾಗೂ ಸಹಾಯಧನ ಸೌಲಭ್ಯ; ಇಲ್ಲಿದೆ ಸಂಪೂರ್ಣ ವಿವರ

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತವು ಪ್ರಸಕ್ತ ಸಾಲಿನಲ್ಲಿ ಐದು ಯೋಜನೆಗಳಿಗೆ ಸಾಲ ಹಾಗೂ ಸಹಾಯಧನ ಸೌಲಭ್ಯ ನೀಡುತ್ತಿದ್ದು, ವೀರಶೈವ ಲಿಂಗಾಯತ ಸಮುದಾಯದ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ಪ್ರವರ್ಗ 3 ಬಿ ಸೇರಿದವರಾಗಿರಬೇಕು ಹಾಗೂ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಅಲ್ಲದೆ ಆಧಾರ್ ಕಾರ್ಡ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ.

‘ಬಸವ ಬೆಳಗು’ ಯೋಜನೆ ಅಡಿ ವೃತ್ತಿಪರ ಕೋರ್ಸ್ ಗಳಿಗೆ ವಾರ್ಷಿಕ 1 ಲಕ್ಷ ರೂಪಾಯಿಗಳ ಮಿತಿಯಲ್ಲಿ ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ವಾರ್ಷಿಕ ಶೇಕಡ ಎರಡರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ‘ವಿದೇಶ ವಿದ್ಯಾ ವಿಕಾಸ’ ಯೋಜನೆಯಡಿ ಮಾನ್ಯತೆ ಪಡೆದಿರುವಂತಹ ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಪಡೆಯಲು ವಾರ್ಷಿಕ ಗರಿಷ್ಠ 3.50 ಲಕ್ಷ ರೂಪಾಯಿಗಳಿಂದ ಮೂರು ವರ್ಷದ ಅವಧಿಗೆ ಒಟ್ಟು ರೂ. 10 ಲಕ್ಷಗಳನ್ನು ಶೇಕಡ ಎರಡರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ.

‘ಜೀವ ಜಲ’ಯೋಜನೆ ಅಡಿ ಸೌಲಭ್ಯ ಪಡೆಯಲು ಸಣ್ಣ ಹಾಗೂ ಅತಿ ಸಣ್ಣ ರೈತರಾಗಿದ್ದು ಕನಿಷ್ಠ ಎರಡು ಎಕರೆ ಹಾಗೂ ಗರಿಷ್ಠ ಐದು ಎಕರೆ ಒಳಗೆ ಜಮೀನು ಹೊಂದಿರಬೇಕು. ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ ಒಂದು ಎಕರೆ ಜಮೀನು ಹೊಂದಿರಬೇಕು. ಈ ಏಳು ಜಿಲ್ಲೆಗಳಲ್ಲಿ 3.50 ಲಕ್ಷ ರೂಪಾಯಿ ಸಹಾಯಧನ ಹಾಗೂ ರೂ. 50,000 ಸಾಲ ಹಾಗೂ ಉಳಿದ 25 ಜಿಲ್ಲೆಗಳಲ್ಲಿ ಎರಡು ಲಕ್ಷ ರೂಪಾಯಿ ಸಹಾಯಧನ ಹಾಗೂ 50,000 ಸಾಲ ಶೇ.4ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ.

ಇನ್ನು ‘ಕಾಯಕ ಕಿರಣ’ ಯೋಜನೆಯಲ್ಲಿ ಐವತ್ತು ಸಾವಿರಗಳವರೆಗಿನ ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಳಿಗೆ ಶೇಕಡ 30ರಷ್ಟು ಗರಿಷ್ಠ 10 ಸಾವಿರಗಳ ಸಹಾಯಧನ ಹಾಗೂ ಉಳಿಕೆ ಶೇಕಡ 70ರಷ್ಟು ಗರಿಷ್ಠ 40,000ಗಳನ್ನು ವಾರ್ಷಿಕ ಶೇಕಡ ಎರಡರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ.

50,001 ರಿಂದ 1 ಲಕ್ಷಗಳವರೆಗಿನ ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಳಿಗೆ ಶೇಕಡ 20ರಷ್ಟು ಗರಿಷ್ಠ 20 ಸಾವಿರ ಸಹಾಯಧನ ಹಾಗೂ ಉಳಿಕೆ ಶೇಕಡ 80% ರಷ್ಟು ಗರಿಷ್ಠ ರೂ. 80 ಸಾವಿರಗಳನ್ನು ವಾರ್ಷಿಕ ಶೇಕಡ ಎರಡರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.

ಹಾಗೆಯೇ ಸ್ವ ಸಹಾಯ ಸಂಘಗಳಿಗೆ ಉತ್ತೇಜನ ನೀಡುವ ಸಲುವಾಗಿ ವೀರಶೈವ ಲಿಂಗಾಯತ ಸಮುದಾಯದ ಸ್ವಸಹಾಯ ಗುಂಪುಗಳ 15 ಸದಸ್ಯರಿಗೆ ತಲಾ ರೂ. 5,000ಗಳ ಸಹಾಯಧನ ಹಾಗೂ ತಲಾ ರೂ. 10 ಸಾವಿರಗಳ ಸಾಲವನ್ನು ವಾರ್ಷಿಕ 4ರಷ್ಟು ಬಡ್ಡಿ ದರದಲ್ಲಿ ಹೀಗೆ ಪ್ರತಿ ಗುಂಪಿಗೆ ರೂ. 75,000ಗಳ ಸಹಾಯ ಧನ ಹಾಗೂ 1.50 ಲಕ್ಷ ರೂಪಾಯಿಗಳ ಸಾಲ ಒಟ್ಟು 2,25,000 ಗಳನ್ನು ಮಂಜೂರು ಮಾಡಲಾಗುತ್ತದೆ.

ಅರ್ಹ ಫಲಾಪೇಕ್ಷಿಗಳು ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ವೆಬ್ಸೈಟ್ https://kvldcl.karnataka.gov.in ಗೆ ಭೇಟಿ ನೀಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...