ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಈ ವಿಷಯವಾಗಿ ಮಾತನಾಡಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, ಅನಾವಶ್ಯಕವಾಗಿ ರಸ್ತೆಗೆ ಬಂದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಹೊರಡಿಸಿರುವ ಎಲ್ಲ ನಿಯಮಗಳನ್ನು ಜಾರಿಗೆ ತರಲಾಗುವುದು. ಇಲ್ಲಿಯವರೆಗೂ ಪೊಲೀಸ್ ಇಲಾಖೆ ಯಾರಿಗೂ ಪಾಸ್ ನೀಡಿಲ್ಲ. ಒಂದು ವೇಳೆ ಸುಳ್ಳು ಹೇಳಿಕೊಂಡು ರಸ್ತೆಗೆ ಬಂದರೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.
ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಈಗಾಗಲೇ ನಗರದಲ್ಲಿನ ಎಲ್ಲ ಡಿಸಿಪಿಗಳಿಗೆ ಸೂಚಿಸಲಾಗಿದೆ. ಕರ್ಫ್ಯೂ, ವೀಕೆಂಡ್ ಬಂದ್ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳಿಗೆ ವಿನಾಯಿತಿ ನೀಡಲಾಗಿದೆ. ಅವರು ಹೊರಗೆ ಬರುವಾಗ ಸೂಕ್ತ ದಾಖಲೆ ಇಟ್ಟುಕೊಂಡು ಬರಬೇಕು ಎಂದು ಸೂಚಿಸಿದ್ದಾರೆ.
ವೀಕೆಂಡ್ ಲಾಕ್ ಡೌನ್ ಸಮಯದಲ್ಲಿ ಇಡೀ ಬೆಂಗಳೂರು ನಗರ ಬಂದ್ ಆಗಿರಲಿದೆ. ಈ ಸಂದರ್ಭದಲ್ಲಿ ಬೇಕಾಬಿಟ್ಟಿಯಾಗಿ ತಿರುಗಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಕೊರೊನಾದ ಎರಡು ಅಲೆಗಳನ್ನು ದಾಟಿ ಬಂದಿದ್ದೇವೆ. ಜನರ ಆರೋಗ್ಯದ ದೃಷ್ಟಿಯಿಂದ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಇಂದಿಗೂ ಕೆಲವರು ಲಸಿಕೆ ಪಡೆದಿಲ್ಲ. ಅವರಿಗೆ ತಿಳುವಳಿಕೆ ಮೂಡಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಬೇಕಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.