ಭಾರೀ ಬಿಸಿಗಾಳಿ ಮತ್ತು ಸೆಕೆ ಅನುಭವಿಸುತ್ತಿರುವ ರಾಜ್ಯದ ಜನತೆಗೆ ಇದು ತಂಪಾದ ವಿಷಯ. ರಾಜ್ಯಾದ್ಯಂತ ಮಳೆಯಾಗುವ ನಿರೀಕ್ಷೆಯಿರುವುದರಿಂದ ಬೆಂಗಳೂರಿಗೆ ವಾರಾಂತ್ಯದಲ್ಲಿ ಶಾಖದಿಂದ ವಿರಾಮ ಸಿಗುವ ನಿರೀಕ್ಷೆಯಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಶನಿವಾರ ಮೇ 20 ಮತ್ತು ಮೇ 21 ರ ಭಾನುವಾರದಂದು ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಮಿಂಚು ಮತ್ತು ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಮೇ 22 ರಂದು ಕರಾವಳಿ ಕರ್ನಾಟಕಕ್ಕೂ ಇದೇ ರೀತಿಯ ಮುನ್ಸೂಚನೆಯನ್ನು ನೀಡಲಾಗಿದೆ. ಆದರೆ ರಾಜ್ಯದ ಉತ್ತರ ಭಾಗದಲ್ಲಿ ಮಳೆಯಾಗುವ ಯಾವುದೇ ಲಕ್ಷಣವಿಲ್ಲವೆಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಮೇ 21 ಮತ್ತು 22 ರಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯನ್ನು ನಿರೀಕ್ಷಿಸಬಹುದು ಎಂದು IMD ತಿಳಿಸಿದೆ. ಆಕಾಶದಲ್ಲಿ ಮೋಡ ಕವಿಯುವ ನಿರೀಕ್ಷೆಯಿದ್ದು ವಾರಾಂತ್ಯದಲ್ಲಿ ಕನಿಷ್ಠ 22 ರಿಂದ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುತ್ತದೆ ಎಂದು ಹೇಳಿದೆ.
ಬೆಂಗಳೂರಿನಲ್ಲಿ ಒಂದು ವಾರದಿಂದ ಆರ್ದ್ರ ವಾತಾವರಣ ಮುಂದುವರೆದಿದೆ. ಗುರುವಾರ ಮೇ 18 ರಂದು ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಬೇಸಿಗೆಯಲ್ಲಿ ನಗರದಲ್ಲಿ ಅನುಭವಿಸುವ ಸರಾಸರಿ ತಾಪಮಾನಕ್ಕಿಂತ ಎರಡು ಡಿಗ್ರಿ ಹೆಚ್ಚು.
ರಾಜ್ಯದ ಇತರ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ವರದಿಗಳ ಪ್ರಕಾರ, ಕಲಬುರಗಿಯಲ್ಲಿ ಮೇ 18 ರಂದು 40.7 ಡಿಗ್ರಿ ಸೆಲ್ಸಿಯಸ್‌ನೊಂದಿಗೆ ರಾಜ್ಯದ ಅತಿ ಹೆಚ್ಚು ತಾಪಮಾನ ದಾಖಲಾಗಿದೆ.
ಈ ಮಧ್ಯೆ, ಬಳ್ಳಾರಿಯಲ್ಲಿ 40.6 ಡಿಗ್ರಿ ಸೆಲ್ಸಿಯಸ್ ಮತ್ತು ರಾಯಚೂರಿನಲ್ಲಿ 40.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಳ್ಳಾರಿಯ ತಾಪಮಾನ ಸರಾಸರಿ ತಾಪಮಾನಕ್ಕಿಂತ ಎರಡು ಡಿಗ್ರಿ ಹೆಚ್ಚಾಗಿದೆ. ವಿಜಯಪುರದಲ್ಲಿ 39.2 ಡಿಗ್ರಿ ಸೆಲ್ಸಿಯಸ್ ಮತ್ತು ಗದಗದಲ್ಲಿ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವರದಿಗಳ ಪ್ರಕಾರ ಗದಗದಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 3 ಡಿಗ್ರಿ ಹೆಚ್ಚಾಗಿದೆ.