ವಿಜಯಪುರ: ವೀಕೆಂಡ್ ಸಂದರ್ಭದಲ್ಲಿ ರೈತರೊಬ್ಬರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸೊಪ್ಪನ್ನು ರಸ್ತೆ ಮಧ್ಯೆದಲ್ಲಿಯೇ ಎಸೆದು ಸರ್ಕಾರದ ವಿರುದ್ಧ ಗುಡುಗಿದ್ದರು. ಸದ್ಯ ಆ ರೈತನಿಗೆ ಸಚಿವರು ಪರಿಹಾರ ವಿತರಿಸಿದ್ದಾರೆ.
ಜಿಲ್ಲೆಯ ಅಥಣಿ ರಸ್ತೆಯಲ್ಲಿ ವೀಕೆಂಡ್ ಸಂದರ್ಭದಲ್ಲಿ ಜಿಲ್ಲೆಯ ಡೋಮನಾಳ ಗ್ರಾಮದ ರೈತ ಭೀಮನಗೌಡ ಬಿರಾದಾರ್ ಎಂಬುವವರು ಸೊಪ್ಪು ಮಾರಾಟಕ್ಕೆ ಮುಂದಾಗಿದ್ದರು. ವೀಕೆಂಡ್ ಇರುವ ಕಾರಣ ಪೊಲೀಸರು ಸೊಪ್ಪು ಮಾರಾಟ ಮಾಡಲು ಬಿಟ್ಟಿರಲಿಲ್ಲ.
ಇದರಿಂದಾಗಿ ರೈತ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸೊಪ್ಪನ್ನು ರಸ್ತೆಯಲ್ಲಿಯೇ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡು ಸೊಪ್ಪು ಮಾರಾಟ ಮಾಡುತ್ತೇವೆ ಎಂದರೂ ಪೊಲೀಸರು ಕೇಳುತ್ತಿಲ್ಲ. ಹೀಗಾದರೆ ರೈತರು ಬದುಕುವುದು ಹೇಗೆ? ಎಂದು ರೈತ ಪ್ರತಿಭಟಿಸಿದ್ದರು.
ಇದನ್ನು ಗಮನಿಸಿದ ತೋಟಗಾರಿಕಾ ಸಚಿವ ಮುನಿರತ್ನ ಅವರು, ಈ ನೊಂದ ರೈತನಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ, 5 ಸಾವಿರ ರೂ. ಪರಿಹಾರವನ್ನೂ ಕೂಡ ನೀಡಿದ್ದಾರೆ.
ಸರ್ಕಾರವು ಎಂದಿಗೂ ರೈತ ಪರವಾಗಿಯೇ ಇರಲಿದೆ. ರೈತರಿಗೆ ಎಂದಿಗೂ ಅನ್ಯಾಯವಾಗುವುದಕ್ಕೆ ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಹೇಳಿದ್ದಾರೆ.