ಕೊರೊನಾ ಹಾಗೂ ಒಮಿಕ್ರಾನ್ ಭೀತಿಯಿಂದ ರಾಜ್ಯದಲ್ಲಿ ಹಿಂದು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲದಕ್ಕೂ ಕಡಿವಾಣ ಹಾಕಲಾಗಿದೆ.
ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲು ಸೂಚಿಸಲಾಗಿದ್ದು, ಮದ್ಯದಂಗಡಿಗಳು ಸಹ ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಬಂದ್ ಇರಲಿದೆ. ಆದರೆ ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕೆಲವರು ಹಣ ಮಾಡಲು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ಆನೇಕಲ್ ಗಡಿಭಾಗದಲ್ಲಿ ಮಧ್ಯದಂಗಡಿಯೊಂದರ ಮುಂದೆ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಈ ವೇಳೆ ಮದ್ಯ ಮಾರಾಟಗಾರ, ಇದರಲ್ಲಿ ಪೊಲೀಸರಿಗೂ ಪಾಲಿದೆ ಎಂದು ಹೇಳಿರುವುದು ಮೊಬೈಲ್ ಕ್ಯಾಮರದಲ್ಲಿ ದಾಖಲಾಗಿದೆ.