
ಜಗತ್ತಿನಲ್ಲಿ ಹಲವು ಬಗೆಯ ವಿಷಕಾರಿ ಹಾವುಗಳಿವೆ. ಕೆಲವಂತೂ ಅತ್ಯಂತ ಅಪಾಯಕಾರಿ. ಬಾಯಿ ಕಚ್ಚಿಕೊಂಡು ವಿಷವನ್ನು ಹೊರಹಾಕುತ್ತವೆ ಈ ಹಾವುಗಳು. ಆದ್ರೆ ಈ ಹಾವು ಎದುರಾಳಿಯನ್ನು ಕೊಲ್ಲಲು ಬಯಸುವುದು ವಿಷವಲ್ಲ, ವಿಷಕಾರಿ ಅನಿಲ. ಗ್ಯಾಸ್ ಮೂಲಕ ಜಾಣ್ಮೆಯಿಂದ ಈ ಹಾವು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ.
ಈಸ್ಟರ್ನ್ ಹೋಗ್ನೋಸ್ ಹಾವು ಇದು. ‘ಪಫ್ ಸ್ನೇಕ್’ ಎಂದು ಕೂಡ ಇದನ್ನು ಕರೆಯಲಾಗುತ್ತದೆ. ಈ ಹಾವಿನ ಬಳಿಯಿರೋ ದೊಡ್ಡ ಆಯುಧವೆಂದರೆ ಗ್ಯಾಸ್. ಎದುರಾಳಿಯ ಮೇಲೆ ದುರ್ವಾಸನೆ ಬಿಟ್ಟು ಅಲ್ಲಿಂದ ತಪ್ಪಿಸಿಕೊಳ್ಳುವುದು.
ಈ ಹಾವು 20 ರಿಂದ 30 ಇಂಚು ಉದ್ದವಿರುತ್ತದೆ. ಸಣ್ಣ ಪಕ್ಷಿಗಳನ್ನು ಇದು ಬೇಟೆಯಾಡುತ್ತದೆ. ಪಕ್ಷಿಗಳು ಮತ್ತು ಇತರ ದೊಡ್ಡ ಹಾವುಗಳ ಬೇಟೆಯನ್ನು ತಪ್ಪಿಸಲು ಪಫ್ ಸ್ನೇಕ್ ದುರ್ವಾಸನೆಯುಳ್ಳ ಗ್ಯಾಸ್ ಬಿಡುತ್ತದೆ. ಈ ನಿರ್ದಿಷ್ಟ ಜಾತಿಯ ಹಾವನ್ನು ದಪ್ಪ ದೇಹದ ತುದಿಯಲ್ಲಿರುವ ದೊಡ್ಡ ತ್ರಿಕೋನ ಆಕಾರದ ತಲೆಯಿಂದ ಗುರುತಿಸಬಹುದು. ಹೆಣ್ಣು ಹಾವುಗಳು ಹೆಚ್ಚು ಉದ್ದವಾಗಿರುತ್ತವೆ.
ವಿಜ್ಞಾನಿಗಳು ಈ ಹಾವುಗಳ ಜೀವಿತಾವಧಿಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಹೊಂದಿಲ್ಲ, ಆದರೆ ಇದು 11 ವರ್ಷಗಳವರೆಗೆ ಬದುಕಬಲ್ಲದು ಎಂದು ನಂಬಲಾಗಿದೆ. ಈಸ್ಟರ್ನ್ ಹೋಗ್ನೋಸ್ ಹಾವಿನ ಮತ್ತೊಂದು ವೈಶಿಷ್ಟ್ಯವೆಂದರೆ ಇವು ವಿಷಕಾರಿ ಕಪ್ಪೆಗಳನ್ನೂ ತಿನ್ನುತ್ತವೆ. ಕಪ್ಪೆಗಳ ವಿಷ ಈ ಹಾವುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಅವುಗಳ ಲಾಲಾರಸ ಗ್ರಂಥಿಗಳು ಕಪ್ಪೆಗಳು ಮತ್ತು ಸಣ್ಣ ಪ್ರಾಣಿಗಳನ್ನು ಕೊಲ್ಲುವ ಸೌಮ್ಯವಾದ ವಿಷವನ್ನು ಸಹ ಹೊರಸೂಸುತ್ತವೆ. ಆದರೆ ಅವು ಮನುಷ್ಯರಿಗೆ ಅಪಾಯಕಾರಿ ಅಲ್ಲ. ಈ ಹಾವುಗಳಿಗೇನಾದ್ರೂ ಹದ್ದು ಎದುರಾದ್ರೆ ಮೊದಲು ತನ್ನ ಕುತ್ತಿಗೆ ಮತ್ತು ಚರ್ಮವನ್ನು ನಾಗರಹಾವಿನಂತೆ ತನ್ನ ತಲೆಯ ಸುತ್ತಲೂ ಹರಡುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಬಂದಂತೆ ನಟಿಸುತ್ತದೆ. ಹಾವು ಸಂಪೂರ್ಣವಾಗಿ ಸ್ಥಿರವಾಗಿರುತ್ತದೆ ಮತ್ತು ದುರ್ವಾಸನೆ ಬಿಟ್ಟು ಸತ್ತಂತೆ ನಟಿಸುತ್ತದೆ. ಇದರಿಂದ ಬೇಟೆಗಾರ ಹಾವು ಸತ್ತಿದೆ ಎಂದು ಭಾವಿಸಿ ಅಲ್ಲಿಂದ ಹೊರಟು ಬಿಡುತ್ತಾನೆ.