ಟಿ20 ವಿಶ್ವಕಪ್ ನಲ್ಲಿ ಅಬ್ಬರಿಸುತ್ತಿರುವ ವಿರಾಟ್ ಕೊಹ್ಲಿ ಬುಧವಾರದಂದು ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ಅರ್ಧಶತಕ ಗಳಿಸಿದ್ದಾರೆ. ಕೇವಲ 44 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೊಂದಿಗೆ ಅವರು ಅಜೇಯ 64 ರನ್ ಬಾರಿಸಿದ್ದಾರೆ.
ಈ ಪಂದ್ಯದಲ್ಲಿ ಭಾರತ 5 ರನ್ ಗಳ ಅಂತರದಿಂದ ಜಯಗಳಿಸಿದ್ದು, ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ಸೆಮಿ ಫೈನಲ್ ಸನಿಹದತ್ತ ಟೀಮ್ ಇಂಡಿಯಾ ಬಂದಿದೆ. ವಿರಾಟ್ ಕೊಹ್ಲಿ ಈ ಸಾಲಿನಲ್ಲಿ ಮೂರನೇ ಅರ್ಧ ಶತಕ ಗಳಿಸಿದ್ದು, ಇದರೊಂದಿಗೆ ಮತ್ತೊಂದು ವಿಶ್ವ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದು, 25 ಪಂದ್ಯಗಳಿಂದ ಅವರು ಒಟ್ಟು 1065 ರನ್ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಶ್ರೀಲಂಕಾದ ಮಹೇಲಾ ಜಯವರ್ಧನೆ ಅವರಿದ್ದು, 31 ಪಂದ್ಯಗಳಿಂದ 1016 ರನ್ ಗಳಿಸಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ (33 ಪಂದ್ಯಗಳಿಂದ 965 ರನ್), ನಾಲ್ಕನೇ ಸ್ಥಾನದಲ್ಲಿ ಭಾರತದ ರೋಹಿತ್ ಶರ್ಮಾ (37 ಪಂದ್ಯಗಳಿಂದ 921 ರನ್) ಹಾಗೂ ಐದನೇ ಸ್ಥಾನದಲ್ಲಿ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ (35 ಪಂದ್ಯಗಳಿಂದ 897 ರನ್) ಇದ್ದಾರೆ.