‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಮಾತಿದೆ. ಮಾತೇ ಮುತ್ತು ಎಂದೂ ಹೇಳಲಾಗುತ್ತದೆ.
ಮಾತು ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಹಾಗಾಗಿ ನಾವಾಡುವ ಮಾತಿನಲ್ಲಿ ಹಿಡಿತವಿರಬೇಕು. ಬಾಯಿಗೆ ಬಂದಂತೆಲ್ಲಾ ಮಾತನಾಡಬೇಡಿ.
ಒಳ್ಳೆಯ ಮಾತುಗಳು ನಿಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. ಬೇರೆಯವರು ಮಾತನಾಡುವ ಸಂದರ್ಭದಲ್ಲಿ ಮಧ್ಯೆ ಬಾಯಿ ಹಾಕಬೇಡಿ. ಬೇರೆಯವರು ಮಾತನಾಡುವುದನ್ನು ಮೊದಲು ಕೇಳಿಸಿಕೊಂಡು, ಬಳಿಕ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರಿ.
ನೀವಾಡುವ ಮಾತುಗಳಿಂದ ಸ್ನೇಹ ಸಂಬಂಧ ವೃದ್ಧಿಸುತ್ತದೆ. ಕೆಲವೊಮ್ಮೆ ನಿಮ್ಮ ಮಾತುಗಳಿಂದಲೇ ಸಂಬಂಧ ಹಾಳಾಗುತ್ತದೆ.
ಸಂಬಂಧವನ್ನು ಹಾಳು ಮಾಡುವ ಮಾತುಗಳನ್ನು ಆಡದಿರಲು ಪ್ರಯತ್ನಿಸಿ. ಯೋಚಿಸಿ ಮಾತನಾಡುವುದು ಒಳಿತು. ಮಾತನಾಡುವ ಸಂದರ್ಭದಲ್ಲಿ ಸ್ಪಷ್ಟವಾಗಿ, ವಿಶ್ವಾಸದಿಂದ ಮಾತನಾಡಿ. ನೀವು ಹೇಳುವುದು ಇನ್ನೊಬ್ಬರಿಗೆ ಅರ್ಥವಾಗುವಂತೆ ಇರಬೇಕು.
ಸಮಯ, ಸಂದರ್ಭಕ್ಕೆ ತಕ್ಕಂತೆ ಮಾತನಾಡಿ, ಸಿಕ್ಕಾಪಟ್ಟೆ ಜಾಸ್ತಿ ಮಾತನಾಡಿದರೆ, ಅಪಹಾಸ್ಯಕ್ಕೆ ಈಡಾಗಬಹುದಾದ ಸಾಧ್ಯತೆ ಇರುತ್ತದೆ. ತಾಳ್ಮೆಯಿಂದ ಪ್ರೀತಿಯಿಂದ ಮಾತನಾಡುವುದರಿಂದ ಆತ್ಮೀಯತೆ ಬೆಳೆಯುತ್ತದೆ. ಹಾಗಾಗಿ ಮಾತನಾಡುವಾಗ ಹಿತ ಮಿತವಾಗಿ ಮಾತನಾಡಿ.