ಜಗತ್ತಿನ ಅತ್ಯಂತ ಪುಟ್ಟ ರಾಷ್ಟ್ರ ಯಾವುದು ಗೊತ್ತಾ? ಅಮೇರಿಕಾದ ನೆವಾಡಾ ರಾಜ್ಯದಲ್ಲಿರೋ ‘ರಿಪಬ್ಲಿಕ್ ಆಫ್ ಮೊಲೋಸಿಯಾ’. ನೆವಾಡಾ ತನ್ನ ಶ್ರೀಮಂತ ಗಣಿಗಾರಿಕೆಯ ಇತಿಹಾಸ ಹೊಂದಿರುವ ವಿಶಾಲವಾದ ರಾಜ್ಯವಾಗಿದೆ.
ಅಚ್ಚರಿಯ ಸಂಗತಿ ಅಂದ್ರೆ ಈ ರಾಜ್ಯದ ಗಡಿಯೊಳಗೊಂದು ಸಾರ್ವಭೌಮ ದೇಶವಿದೆ. ಅದೇ ರಿಪಬ್ಲಿಕ್ ಆಫ್ ಮೊಲೋಸಿಯಾ. ಪುಟ್ಟದಾದರೂ ಸಖತ್ ಇಂಟ್ರೆಸ್ಟಿಂಗ್ ಆಗಿರೋ ಕಂಟ್ರಿ ಇದು.
ರಿಪಬ್ಲಿಕ್ ಆಫ್ ಮೊಲೋಸಿಯಾಕ್ಕೆ ತೆರಳಲು ಕಾರ್ಸನ್ ಸಿಟಿಯ ಪಶ್ಚಿಮಕ್ಕೆ ಸುಮಾರು ಮೂವತ್ತು ನಿಮಿಷ ಪ್ರಯಾಣಿಸಬೇಕು. ಅದೆಷ್ಟು ಚಿಕ್ಕ ದೇಶವೆಂದರೆ ಮೊಲೋಸಿಯಾದ ವಿಸ್ತೀರ್ಣ ಎರಡು ಎಕರೆಗಿಂತಲೂ ಕಡಿಮೆ ಇದೆ. ಇದು ನೆವಾಡಾದ ಡೇಟನ್‌ನಲ್ಲಿ ಕಾರ್ಸನ್ ನದಿಯ ದಡದಲ್ಲಿದೆ.
1977 ರಲ್ಲಿ ಮೊಲೋಸಿಯಾ ಸ್ಥಾಪನೆಯಾಯ್ತು. ಈ ದೇಶವನ್ನು ಮೂಲತಃ ಗ್ರ್ಯಾಂಡ್ ರಿಪಬ್ಲಿಕ್ ಆಫ್ ವಾಲ್ಡ್‌ಸ್ಟೈನ್ ಎಂದು ಕರೆಯಲಾಯಿತು. ಸುಮಾರು 20 ವರ್ಷಗಳ ನಂತರ ಇದರ ಹೆಸರನ್ನು 1998 ರಲ್ಲಿ ಮೊಲೋಸಿಯಾ ಸಾಮ್ರಾಜ್ಯ ಎಂದು ಬದಲಾಯಿಸಲಾಯಿತು. ಮೊಲೋಸಿಯಾವನ್ನು ಯಾರು ಆಳುತ್ತಾರೆ ಎಂದು ನೀವು ಆಶ್ಚರ್ಯ ಪಡುತ್ತಿರಬೇಕು? ಆತನ ಹೆಸರು ಕೆವಿನ್ ಬಾಗ್. ಕೆವಿನ್ ಹದಿಹರೆಯದವನಾಗಿದ್ದಾಗ ಸ್ನೇಹಿತನೊಂದಿಗೆ ಸೇರಿ ಈ ರಾಷ್ಟ್ರವನ್ನು ಸ್ಥಾಪಿಸಿದ.
ನಿರ್ಭೀತ ನಾಯಕನೆಂದೇ ಕೆವಿನ್ ಹೆಸರು ಮಾಡಿದ್ದಾನೆ. ವಿವಿಧ ಕಾರ್ಯಕ್ರಮಗಳಲ್ಲಿ ರಾಷ್ಟ್ರವನ್ನು ಪ್ರತಿನಿಧಿಸ್ತಾನೆ. ಇಲ್ಲಿನ ಜನರ ಪ್ರೀತಿ ಗಳಿಸಿದ್ದಾನೆ. ಫ್ರೆಂಡ್‌ಶಿಪ್ ಗೇಟ್‌ವೇ, ಬ್ಯಾಂಕ್ ಆಫ್ ಕಿಕಾಸಿಯಾ ಮತ್ತು ಮೊಲೋಸಿಯನ್ ಸರ್ಕಾರಿ ಕಛೇರಿ ರಿಪಬ್ಲಿಕ್ ಆಫ್ ಮೊಲೋಸಿಯಾದಲ್ಲಿದೆ. ಪ್ರವಾಸಿಗರು ಮೊಲೋಸಿಯಾಕ್ಕೆ ಭೇಟಿ ನೀಡಬಹುದು. ಭೇಟಿಗೂ ಮೊದಲೇ ಬುಕ್ಕಿಂಗ್ ಮಾಡಿಕೊಂಡಿರಬೇಕು. ಪ್ರವಾಸಿಗರು ಇಲ್ಲಿಗೆ ಬರಲು ಮೊಲೋಸಿಯಾದ ಕರೆನ್ಸಿ ವಲೋರಾವನ್ನು ಪಡೆದುಕೊಳ್ಳಬೇಕು.
ಇಲ್ಲಿನ ಜನರು ಎಸ್ಪೆರಾಂಟೊ ಮತ್ತು ಸ್ಪ್ಯಾನಿಷ್ ಭಾಷೆಯನ್ನು ಮಾತನಾಡ್ತಾರೆ. ಆದ್ರೆ ಇವರ ರಾಷ್ಟ್ರೀಯ ಭಾಷೆ ಇಂಗ್ಲಿಷ್. ಅಚ್ಚರಿಯಾದ್ರೂ ಇದು ಸತ್ಯ, ಈ ದೇಶದಲ್ಲಿರೋದು ಕೇವಲ 30 ಜನರು ಮಾತ್ರ. ಇಂತಹ ಸ್ವಯಂ ಘೋಷಿತ ದೇಶಗಳನ್ನು ಮೈಕ್ರೊನೇಷನ್ ಎಂದು ಕರೆಯಲಾಗುತ್ತದೆ. ಇವುಗಳನ್ನು ವಿಶ್ವಸಂಸ್ಥೆ ಅಥವಾ ಇತರ ಯಾವುದೇ ದೇಶಗಳು ಗುರುತಿಸುವುದಿಲ್ಲ.
ಅವರಿಗೆ ಅವರದೇ ಆದ ಗಡಿ, ಕಾನೂನು, ಬ್ಯಾಂಕಿಂಗ್ ವ್ಯವಸ್ಥೆ, ಸೈನಿಕರು ಇದ್ದಾರೆ. ಆದರೆ ನೆರೆಯ ದೇಶವೂ ಅವರಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಒಟ್ಟು 30 ಜನರು ಇಲ್ಲಿ ವಾಸಿಸುತ್ತಿದ್ದಾರೆ, 4 ನಾಯಿಗಳು ಸಹ ಇವೆ.