
ವಿಶ್ವದಲ್ಲಿ ಅನೇಕ ಘಟಾನುಘಟಿ ಕಂಪನಿಗಳಿವೆ. 25 ಅತಿ ಶ್ರೀಮಂತ ಕಂಪನಿಗಳ ಪಟ್ಟಿಯೂ ಈಗ ಹೊರಬಿದ್ದಿದೆ. ಇವುಗಳಲ್ಲಿ ಬಹುಪಾಲು ಅಮೆರಿಕದ್ದು, ಆದರೆ ಭಾರತೀಯ ಸಂಸ್ಥೆಗಳ ಹೆಸರೇ ಇಲ್ಲ. ಜಗತ್ತಿನ ಅತ್ಯಂತ ಶ್ರೀಮಂತ ಟಾಪ್ ಟೆನ್ ಕಂಪನಿಗಳ ಪಟ್ಟಿಯಲ್ಲಿ ಎಂಟು ಕಂಪನಿಗಳು ಅಮೆರಿಕ ಮೂಲದವು. ಆಪಲ್ನಿಂದ ಮೆಟಾವರೆಗಿನ ಅನೇಕ ಕಂಪನಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಉಳಿದ ಎರಡು ಸಂಸ್ಥೆಗಳು ಸೌದಿ ಅರೇಬಿಯಾ ಮತ್ತು ತೈವಾನ್ ದೇಶದ್ದಾಗಿವೆ.
ವಿಶ್ವದ ಅತಿ ಶ್ರೀಮಂತ ಕಂಪನಿ, ಟಾಪ್ ಟೆನ್ ಲಿಸ್ಟ್ನಲ್ಲಿ ಮೊದಲ ಸ್ಥಾನದಲ್ಲಿದೆ ಐಫೋನ್ ತಯಾರಕ ಆಪಲ್. ಇದರ ಒಟ್ಟು ಮಾರುಕಟ್ಟೆ ಮೌಲ್ಯ 2.8 ಟ್ರಿಲಿಯನ್ ಡಾಲರ್. ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಆಪಲ್ ಕಂಪನಿ ಇತ್ತೀಚೆಗೆ ಅದರ ಎರಡು ಮಳಿಗೆಗಳನ್ನು ಮುಂಬೈ ಮತ್ತು ದೆಹಲಿಯಲ್ಲಿ ತೆರೆದಿದೆ.
ಎರಡನೇ ಶ್ರೀಮಂತ ಕಂಪನಿಯೆಂದರೆ ಮೈಕ್ರೋಸಾಫ್ಟ್. ಇದರ ಒಟ್ಟಾರೆ ಮೌಲ್ಯ 2.4 ಟ್ರಿಲಿಯನ್ ಡಾಲರ್. ಇದರ ಮಾಲೀಕ ಬಿಲ್ ಗೇಟ್ಸ್ ಕೂಡ ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮೈಕ್ರೋಸಾಫ್ಟ್ ಕೂಡ ಅಮೆರಿಕದ ಕಂಪನಿ.
ಮೂರನೇ ಸ್ಥಾನದಲ್ಲಿ ಸೌದಿ ಅರೇಬಿಯಾದ ಸೌದಿ ಅರಾಮ್ಕೊ ಕಂಪನಿಯಿದೆ. ಇದರ ಮಾರುಕಟ್ಟೆ ಮೌಲ್ಯ 2 ಟ್ರಿಲಿಯನ್ ಡಾಲರ್. ಇದು ತೈಲ ಸಂಸ್ಕರಣಾ ಸಂಸ್ಥೆ. ಇದರ ನಂತರದ ಸ್ಥಾನ ಗೂಗಲ್ನ ಮೂಲ ಕಂಪನಿ ಆಲ್ಫಾಬೆಟ್ನದ್ದು. ಇದರ ಮೌಲ್ಯ 1.55 ಟ್ರಿಲಿಯನ್ ಡಾಲರ್. ಇದು ನಾಲ್ಕನೇ ಸ್ಥಾನದಲ್ಲಿದೆ.
1.24 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿರೋ ಅಮೇಜಾನ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ ಮಾಹಿತಿಯ ಪ್ರಕಾರ, NVIDIA ಆರನೇ ಸ್ಥಾನದಲ್ಲಿದ್ದು, ಇದರ ಮೌಲ್ಯ 925 ಶತಕೋಟಿ ಡಾಲರ್.
ಏಳನೇ ಶ್ರೀಮಂತ ಕಂಪನಿಯಾದ ಬರ್ಕ್ಷೈರ್ 734 ಶತಕೋಟಿ ಡಾಲರ್ ಮೌಲ್ಯ ಹೊಂದಿದೆ. ಎಲೋನ್ ಮಸ್ಕ್ ಅವರ ಟೆಸ್ಲಾ ಎಂಟನೇ ಸ್ಥಾನದಲ್ಲಿದ್ದು, 711 ಶತಕೋಟಿ ಡಾಲರ್ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. 9ನೇ ಸ್ಥಾನದಲ್ಲಿ ಮೆಟಾ ಮತ್ತು 10ನೇ ಸ್ಥಾನದಲ್ಲಿ ಎಸ್ಎಂಸಿ ಕಂಪನಿಗಳಿವೆ.