ಭಾರತೀಯ ಕ್ರಿಕೆಟ್ ತಂಡದ ನಾಯಕನ ಸ್ಥಾನವನ್ನು ವಿರಾಟ್ ಕೊಹ್ಲಿ ವಹಿಸಿಕೊಂಡಾಗಿನಿಂದ ತಾಯ್ನೆಲ ಹಾಗೂ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ತಂಡ ತೋರಿಸಿತ್ತು. ಆದರೆ, ಪ್ರಮುಖ ಟ್ರೋಫಿ ಗೆಲ್ಲುವಲ್ಲಿ ತಂಡ ವಿಫಲವಾಗಿತ್ತು. ಹೀಗಾಗಿಯೇ ಕೊಹ್ಲಿ ನಾಯಕತ್ವದಿಂದ ಹಿಂದೆ ಸರಿಯುವಂತಾಗಿದೆ.
ಕೊಹ್ಲಿ ನೇತೃತ್ವದಲ್ಲಿ ಸಾಕಷ್ಟು ಸರಣಿ ಗೆದ್ದರೂ ಐಸಿಸಿ ಟ್ರೋಪಿ ಗೆಲ್ಲುವಲ್ಲಿ ತಂಡ ವಿಫಲವಾಗಿದ್ದಕ್ಕೆ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಕೊಹ್ಲಿ ಅವರೊಂದಿಗೆ ತಂಡದ ಮುಖ್ಯ ಕೋಚ್ ಆಗಿದ್ದ ರವಿ ಶಾಸ್ತ್ರಿ ಅವರನ್ನು ಕೂಡ ಆ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು.
ಈ ಕುರಿತು ಮಾತನಾಡಿರುವ ಮಾಜಿ ಕೋಚ್ ರವಿ ಶಾಸ್ತ್ರೀ, ಭಾರತೀಯ ತಂಡವು ಇತ್ತೀಚೆಗೆ ಐತಿಹಾಸಿಕ ಸಾಧನೆಗಳನ್ನು ಮಾಡಿದೆ. ಭಾರತ ಸೇರಿದಂತೆ ವಿದೇಶಗಳಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆದ್ದಿದೆ. ಆದರೆ, ವಿಶ್ವಕಪ್ ಗೆಲ್ಲದಿರುವುದಕ್ಕೆ ಟೀಕಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಅಲ್ಲದೇ, ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಸೇರಿದಂತೆ ಹಲವರು ಪ್ರತಿಭಾನ್ವಿತ ನಾಯಕರು ಇದ್ದಾಗಲೂ ಭಾರತ ತಂಡ ವಿಶ್ವಕಪ್ ಗೆದ್ದಿಲ್ಲ. ಕ್ರಿಕೆಟ್ ನ ಲೆಜೆಂಡ್ ಸಚಿನ್ ತೆಂಡೂಲ್ಕರ್ ವಿಶ್ವಕಪ್ ಗೆಲ್ಲುವುದಕ್ಕೂ ಮುನ್ನ 6 ಬಾರಿ ವಿಶ್ವಕಪ್ ಆಡಿದ್ದಾರೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಕೇವಲ ಇಬ್ಬರು ನಾಯಕರು ಮಾತ್ರ ವಿಶ್ವಕಪ್ ಗೆದ್ದಿದ್ದಾರೆ. ಇವರಷ್ಟೇ ಉತ್ತಮರಾ? ಉಳಿದವರು ಉತ್ತಮರಲ್ಲವೇ? ಎಂದು ಗುಡುಗಿದ್ದಾರೆ.
ಕೊಹ್ಲಿ ನಾಯಕತ್ವದಲ್ಲಿ ಬರೋಬ್ಬರಿ 5 ವರ್ಷಗಳ ಕಾಲ ಭಾರತ ತಂಡ ಟೆಸ್ಟ್ ನ ನಂ.1 ಸ್ಥಾನದಲ್ಲಿತ್ತು. ಇದು ಸಾಧಾರಣ ಸಾಧನೆಯಲ್ಲ ಎಂದು ಹೇಳಿದ್ದಾರೆ.