ವಿವಾಹದ ಬಳಿಕ ಲೈಂಗಿಕ ಸಂಬಂಧವನ್ನು ನಿರಾಕರಿಸುವುದು ಕ್ರೌರ್ಯಕ್ಕೆ ಸಮಾನ ಎಂದು ಛತ್ತೀಗಢದ ಹೈಕೋರ್ಟ್ ಹೇಳಿದ್ದು ದಂಪತಿಗೆ ವಿಚ್ಛೇದನ ನೀಡಿದೆ.
ನ್ಯಾಯಮೂರ್ತಿಗಳಾದ ಪಿ. ಶ್ಯಾಮ್ ಕೋಶಿ ಹಾಗೂ ಪಾರ್ಥ ಪ್ರತಿಮ್ ಸಾಹು ಅವರಿದ್ದ ವಿಭಾಗೀಯ ಪೀಠವು ಆರೋಗ್ಯಕರ ದಾಂಪತ್ಯಕ್ಕೆ ಲೈಂಗಿಕ ಸಂಬಂಧ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣದಲ್ಲಿ ಪತ್ನಿ ಕ್ರೌರ್ಯ ಮಾಡಿದ್ದಾಳೆ ಎಂದು ನ್ಯಾಯಪೀಠ ಭಾವಿಸುತ್ತದೆ. ಆರೋಗ್ಯಕರ ದಾಂಪತ್ಯಕ್ಕೆ ಪತಿ – ಪತ್ನಿ ನಡುವಿನ ದೈಹಿಕ ಸಂಬಂಧವು ಅತ್ಯಗತ್ಯವಾಗಿದೆ. ಕಳೆದ 10 ವರ್ಷಗಳಿಂದ ಈ ದಂಪತಿಯ ನಡುವೆ ದೈಹಿಕ ಸಂಬಂಧವೇ ಇರಲಿಲ್ಲ. ಹೀಗಾಗಿ ನಾವು ಅರ್ಜಿದಾರರ ಮನವಿಯನ್ನು ಪುರಸ್ಕರಿಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ.
ಬಿಲಾಸ್ಪುರದ ವ್ಯಕ್ತಿಯೊಬ್ಬರು ನವೆಂಬರ್ 25, 2007 ರಂದು ಬೆಮೆತಾರಾ ಜಿಲ್ಲೆಯ ಮಹಿಳೆಯನ್ನು ವಿವಾಹವಾದರು. ಮದುವೆಯ ನಂತರ, ತವರು ಮನೆಗೆ ಹೋಗಿದ್ದ ಪತ್ನಿಯು ಬಹಳ ದಿನದ ಬಳಿಕ ಪತಿಯ ಮನೆಗೆ ಮರಳಿದ್ದಳು. ಇದಾದ ಬಳಿಕ ಅರ್ಜಿದಾರರ ತಂದೆ 2011ರಲ್ಲಿ ಮೃತಪಟ್ಟಿದ್ದರು. ಈ ಸಮಯದಲ್ಲಿ ಪತಿಯ ಜೊತೆಯಿದ್ದ ಪತ್ನಿಯು ಮತ್ತೆ ತವರು ಮನೆಗೆ ಹೋದಳು.
2010 ರ ಬಳಿಕ ಪತ್ನಿಯು ವರ್ಷಗಳೇ ಉರುಳಿದರೂ ಸಹ ಪತಿಯ ಮನೆಗೆ ವಾಪಸ್ಸಾಗಿರಲಿಲ್ಲ. 2014ರಲ್ಲಿ ಪತಿಯ ಮನೆಗೆ ಬಂದಿದ್ದ ಪತ್ನಿಯು ಮತ್ತೆ ತವರು ಮನೆಗೆ ಮರಳಿದ್ದಳು. ಇದರಿಂದ ಬೇಸತ್ತ ಪತಿಯ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು.