ವಿಮೆ ಇಲ್ಲದ ವಾಹನಗಳಿಂದ ಅಪಘಾತಗಳಾದ ಸಂದರ್ಭದಲ್ಲಿ ಸಂತ್ರಸ್ತರು ಪರಿಹಾರ ಪಡೆಯಲು ಸಂಕಷ್ಟ ಎದುರಿಸಬೇಕಾಗುತ್ತದೆ. ಇದೀಗ ದೆಹಲಿ ಹೈಕೋರ್ಟ್ ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಮಹತ್ವದ ಸೂಚನೆಯೊಂದನ್ನು ನೀಡಿದೆ.
ಇಂತಹ ವಾಹನಗಳಿಂದ ಉಂಟಾಗುವ ರಸ್ತೆ ಅಪಘಾತ ಹಾಗೂ ಹಿಟ್ ಅಂಡ್ ರನ್ ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಅಗತ್ಯ ಕಾನೂನು ಜಾರಿಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಸೂಚಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ವಿಮೆ ಹೊಂದಿರದ ವಾಹನಗಳಿಂದ ಉಂಟಾಗುವ ರಸ್ತೆ ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಕುರಿತಂತೆ ಈಗಾಗಲೇ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಕೆಲವೊಂದು ಮಾರ್ಗ ಸೂಚಿಗಳನ್ನು ರೂಪಿಸಬೇಕಿರುವ ಕಾರಣ ಇದಕ್ಕಾಗಿ ಆರು ತಿಂಗಳು ಕಾಲಾವಕಾಶ ನೀಡಬೇಕೆಂದು ಕೋರಿದ್ದು, ಇದನ್ನು ನ್ಯಾಯ ಪೀಠ ಮಾನ್ಯ ಮಾಡಿದೆ.