ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 29 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಫೆಬ್ರವರಿ 28 ರಂದು ಘಟನೆ ನಡೆದಿದ್ದು, 34 ವರ್ಷದ ಮಹಿಳೆ ವಿಮಾನದಲ್ಲಿ ಕಿರುಕುಳ ನೀಡಿದ ಆರೋಪಿ ಅಭಿಷೇಕ್ ಕುಮಾರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಅಭಿಷೇಕ್ ಕುಮಾರ್ ಸಿಂಗ್ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯ ತನಿಖೆ ನಡೆಸಲು ಸಮನ್ಸ್ ಕಳುಹಿಸಿದ್ದಾರೆ.
ವಿಮಾನ ಟೇಕ್ ಆಫ್ ಆದ ನಂತರ ಆರೋಪಿ ತನ್ನ ಭುಜದ ಮೇಲೆ ಒರಗಲು ಪ್ರಯತ್ನಿಸಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಅದನ್ನು ವಿರೋಧಿಸಿದಾಗ ಆತ ಆಕೆಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಸಂತ್ರಸ್ತೆ, ದಣಿವಾಗಿದ್ದ ಕಾರಣ ನಾನು ಮಲಗಿದ್ದೆ. ಆದರೆ ಸ್ವಲ್ಪ ಸಮಯದ ನಂತರ, ಯಾರೋ ನನ್ನನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದಾರೆ ಎಂಬುದು ಅರಿವಾಯಿತು. ನಾನು ಎಚ್ಚರಗೊಂಡು ಕೂಗಿದ ನಂತರ ಆತ ತನ್ನ ಕೈಗಳನ್ನು ತೆಗೆದುಕೊಂಡ. ನಾನು ತಕ್ಷಣ ಗಗನಸಖಿಯನ್ನು ಕರೆದು ವಿಷಯ ಹೇಳಿದೆ, ಆಕೆ ಅವನನ್ನು ಬೇರೆ ಸ್ಥಳದಲ್ಲಿ ಕುಳಿತುಕೊಳ್ಳಲು ಕೇಳಿದರು ಆತ ಅದನ್ನು ನಿರಾಕರಿಸಿದ ಎಂದು ತಿಳಿಸಿದ್ದಾರೆ.