ವಿಮಾನದಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿದ್ರೆ ಜೀವಕ್ಕೇ ಅಪಾಯ. ಕೆಲದಿನಗಳ ಹಿಂದಷ್ಟೆ ಪೈಲಟ್ ಒಬ್ಬನಿಗೆ ಹಾರುತ್ತಿದ್ದ ವಿಮಾನದಲ್ಲೇ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ಅಲ್ಲೇ ಕೋಮಾಕ್ಕೆ ಜಾರಿದ್ದ ಆತ ನಂತರ ಮೃತಪಟ್ಟಿದ್ದ.
ಈ ರೀತಿ ವಿಮಾನ ಪ್ರಯಾಣದ ವೇಳೆ ಕಾರ್ಡಿಯಾಕ್ ಅರೆಸ್ಟ್ ಆದಲ್ಲಿ ತಕ್ಷಣಕ್ಕೆ ಏನು ಮಾಡಬೇಕು ಅನ್ನೋದನ್ನು ಖುದ್ದು ವೈದ್ಯರೇ ವಿವರಿಸಿದ್ದಾರೆ. ಯುಪಿಎಂಸಿ ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿ ನಿರ್ದೇಶಕರಾದ ಕಾಶಿಫ್ ಎಂ ಚೌಧರಿ ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ಕಾಶಿಫ್ ಅವರಿದ್ದ ವಿಮಾನದಲ್ಲಿ 20ರ ಯುವತಿಗೆ ಇದ್ದಕ್ಕಿದ್ದಂತೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಕಣ್ಣು ಗುಡ್ಡೆಗಳೆಲ್ಲಾ ಮೇಲಕ್ಕೆ ಹೋಗಿ, ಆಕೆಯ ಉಸಿರು ಸಹ ನಿಂತೇ ಹೋಗಿದೆ. ಸುತ್ತ ಇದ್ದ ಸ್ನೇಹಿತೆಯರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಕಾಶಿಫ್, ಮತ್ತವರ ಪತ್ನಿ ಹಾಗೂ ಇನ್ನೋರ್ವ ಕಾರ್ಡಿಯಾಲಜಿಸ್ಟ್ ಸಹಾಯಕ್ಕೆ ಧಾವಿಸಿದ್ರು.
ಯುವತಿಯನ್ನು ಮಲಗಿಸಿದ ವೈದ್ಯರ ತಂಡ ಸಿಪಿಆರ್ ಶುರು ಮಾಡಿದೆ. ಫಸ್ಟ್ ಏಯ್ಡ್ ಕಿಟ್ ನಲ್ಲಿದ್ದ ಎಇಡಿಯನ್ನು ಯುವತಿಗೆ ಹಚ್ಚಿದ್ದಾರೆ. ಅದೃಷ್ಟವಶಾತ್ ಸಿಪಿಆರ್ ಮಾಡಿ 90 ಸೆಕೆಂಡ್ ಗಳಲ್ಲಿ ಆಕೆಗೆ ಪ್ರಜ್ಞೆ ಮರಳಿದೆ. ಉಸಿರಾಡಲಾರಂಭಿಸಿದ ಯುವತಿ, ನಿಧಾನವಾಗಿ ಎದ್ದು ಕುಳಿತಿದ್ದಾಳೆ.
ತಕ್ಷಣವೇ ಹತ್ತಿರದ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಮಾಡಿ, ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಯ್ತು. ವೈದ್ಯರು ಮಾಡಿದ ಈ ಸಿಪಿಆರ್ ಅನ್ನು ಸಾಮಾನ್ಯ ಜನರು ಕೂಡ ಮಾಡಬಹುದು ಎನ್ನುತ್ತಾರೆ ಡಾಕ್ಟರ್ ಕಾಶಿಫ್. ಇಂತಹ ತುರ್ತು ಸಂದರ್ಭದಲ್ಲಿ ಒಬ್ಬರ ಜೀವವನ್ನು ಕಾಪಾಡಲು ಇದು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸಿಪಿಆರ್ ಮಾಡುವುದನ್ನು ಕಲಿಯಿರಿ ಅಂತಾ ಹೇಳಿದ್ದಾರೆ.
1. 911 ಗೆ ಕರೆ ಮಾಡಿ ಅಥವಾ ಇತರರ ಸಹಾಯ ಕೇಳಿ.
2. ಕಾರ್ಡಿಯಾಕ್ ಅರೆಸ್ಟ್ ಗೆ ತುತ್ತಾದ ವ್ಯಕ್ತಿಯನ್ನು ಬೆನ್ನಿನ ಮೇಲೆ ಮಲಗಿಸಿ ಮತ್ತವರ ವಾಯುಮಾರ್ಗಗಳನ್ನು ತೆರೆಯಿರಿ.
3.ಆಗ ಉಸಿರಾಡದೇ ಇದ್ದರೆ ಸಿಪಿಆರ್ ಪ್ರಾರಂಭಿಸಿ.
4. 30 ಎದೆಯ ಸಂಕೋಚನಗಳು (ಕಂಪ್ರೆಶನ್ಸ್)
5. ಎರಡು ರೆಸ್ಕ್ಯೂ ಬ್ರೀತ್ಸ್
6. ಆಂಬ್ಯುಲೆನ್ಸ್ ಅಥವಾ ಎಇಡಿ ಬರುವವರೆಗೆ ಇದನ್ನು ಪುನರಾವರ್ತಿಸಿ.