ನೇಪಾಳದಲ್ಲಿ ಸಂಭವಿಸಿದ ವಿಮಾನ ದುರಂತದ ಕರಿಛಾಯೆ ಇನ್ನೂ ಜನರ ಮನಸ್ಸಿನಿಂದ ಮರೆಯಾಗಿಲ್ಲ. 72 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಅರೆಕ್ಷಣದಲ್ಲಿ ಸುಟ್ಟು ಭಸ್ಮವಾಗಿರುವ ವಿಡಿಯೋ ಕೂಡ ಈಗಾಗ್ಲೇ ಇಂಟರ್ನೆಟ್‌ನಲ್ಲಿ ಹರಿದಾಡ್ತಾ ಇದೆ. ಪತನಗೊಂಡ ಯೇತಿ ಏರ್‌ಲೈನ್ಸ್ ವಿಮಾನದಲ್ಲಿದ್ದ ಗಗನಸಖಿಯೊಬ್ಬಳ ವಿಡಿಯೋ ಈಗ ವೈರಲ್ ಆಗಿದೆ. ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ನಾಲ್ವರು ಕ್ಯಾಬಿನ್ ಸಿಬ್ಬಂದಿಗಳಲ್ಲಿ ಈ ಯುವತಿಯೂ ಸೇರಿದ್ದಾಳೆ. ಈಕೆಯ ಹೆಸರು ಒಶಿನ್ ಅಲೆ, ಗಗನಸಖಿಯಾಗಿ ಕರ್ತವ್ಯ ನಿರ್ವಹಿಸ್ತಿದ್ದ ಈ ಯುವತಿ ನೇಪಾಳದಲ್ಲಿ ಜನಪ್ರಿಯ ಟಿಕ್ ಟಾಕರ್ ಎನಿಸಿಕೊಂಡಿದ್ದಳು.
ಭಾನುವಾರ ಪತನಗೊಂಡಿರುವ ವಿಮಾನದಲ್ಲಿ ಸಾವಿಗೂ ಮುನ್ನ ಓಶಿನ್ ಟಿಕ್‌ಟಾಕ್ ವಿಡಿಯೋ ಒಂದನ್ನು ಮಾಡಿದ್ದಾಳೆ. ನಗುತ್ತಾ ಆಕೆ ಕ್ಯಾಮರಾಗೆ ಪೋಸ್ ಕೊಟ್ಟಿರೋ ವಿಡಿಯೋ ಈಗ ಲಭ್ಯವಾಗಿದೆ. ಅದಾಗಿ ಕೆಲ ಹೊತ್ತಿನಲ್ಲೇ ಒಶಿನ್, ವಿಮಾನ ದುರಂತದಲ್ಲಿ ಸುಟ್ಟು ಕರಕಲಾಗಿ ಹೋಗಿದ್ದಾಳೆ. ಐವರು ಭಾರತೀಯರು ಸೇರಿದಂತೆ 72 ಜನರಿದ್ದ ಪ್ರಯಾಣಿಕ ವಿಮಾನವು ರೆಸಾರ್ಟ್ ಸಿಟಿ ಪೊಖರಾದಲ್ಲಿ ಹೊಸದಾಗಿ ತೆರೆಯಲಾದ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ನದಿಯ ಕಮರಿನಲ್ಲಿ ಪತನಗೊಂಡಿತು. ವಿಮಾನದಲ್ಲಿದ್ದ 68 ಜನರು ಸಾವನ್ನಪ್ಪಿದ್ದರು.
ಭಾರತೀಯ ಪ್ರಯಾಣಿಕನೊಬ್ಬ ಅಪಘಾತಕ್ಕೆ ಮುನ್ನ ಕೊನೆಯ ಕ್ಷಣಗಳನ್ನು ಲೈವ್‌ಸ್ಟ್ರೀಮ್ ಮಾಡಿರುವ ವಿಡಿಯೋ ಕೂಡ ಹೊರಬಿದ್ದಿದೆ. ಉತ್ತರ ಪ್ರದೇಶದ ಗಾಜಿಪುರದಿಂದ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಯಾಣಿಕರಲ್ಲಿ ಒಬ್ಬರಾದ ಸೋನು ಜೈಸ್ವಾಲ್, ದುರಂತದ ಕೊನೆಯ ಕ್ಲಿಪ್ ಅನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಜೈಸ್ವಾಲ್ ಆ ಸಮಯದಲ್ಲಿ ಫೇಸ್‌ಬುಕ್ ಲೈವ್ ಮಾಡುತ್ತಿದ್ದರು. ಸಾವಿಗೂ ಮುನ್ನ ಪ್ರಯಾಣಿಕರ ಕೊನೆ ಕ್ಷಣದ ವಿಡಿಯೋಗಳನ್ನು ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ಘಟನೆ ಬಗ್ಗೆ ಅತೀವ ನೋವು, ದುಃಖವನ್ನು ವ್ಯಕ್ತಪಡಿಸಿದ್ದಾರೆ.