ವಿಮಾನದಲ್ಲಿ ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡುವ ಪ್ರಕರಣಗಳು ಹೆಚ್ಚಾಗ್ತಿದ್ದು ಬೆಚ್ಚಿಬೀಳಿಸುತ್ತಿರುವ ಬೆನ್ನಲ್ಲೇ, ಮತ್ತೊಂದು ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಯೊಬ್ಬ ಏರ್ ಪೋರ್ಟ್ ನಲ್ಲಿ ಸಾರ್ವಜನಿಕವಾಗೇ ಮೂತ್ರ ವಿಸರ್ಜನೆ ಮಾಡಿದ್ದಾನೆ.
ಜನವರಿ 8 ರಂದು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ಗೇಟ್ 6 ರ ಮುಂದೆ ಕುಡಿದ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ವರದಿಯಾಗಿದೆ.
ದೆಹಲಿಯಿಂದ ದಮ್ಮಾಮ್‌ಗೆ ವಿಮಾನದಲ್ಲಿ ಹೊರಡುವ ಸಮಯದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯನ್ನು ಜೌಹರ್ ಅಲಿ ಖಾನ್ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿದ್ದ ಪ್ರಯಾಣಿಕರ ಪ್ರಕಾರ ಖಾನ್ ಕುಡಿದ ಮತ್ತಿನಲ್ಲಿದ್ದ. ಇತರ ಪ್ರಯಾಣಿಕರನ್ನು ನಿಂದಿಸಿದ್ದಾನೆ. ಅವನನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಜೌಹರ್ ಅಲಿ ಖಾನ್ ಎಂಬ ಪ್ರಯಾಣಿಕ ಡಿಪಾರ್ಚರ್ ಗೇಟ್ ನಂ. 6 ರಲ್ಲಿ ಕುಡಿದ ಸ್ಥಿತಿಯಲ್ಲಿದ್ದರು. ಅವರು ಪ್ರಯಾಣಿಕರ ಎದುರೇ ಸಾರ್ವಜನಿಕ ಸ್ಥಳದಲ್ಲಿ ಪ್ಯಾಂಟ್ ಜಿಪ್ ತೆರೆದು ಮೂತ್ರ ವಿಸರ್ಜಿಸಿದ್ದಾರೆ. ಇದರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಕಿರುಚಾಟ ಮತ್ತು ಸಾಮಾನ್ಯ ಜನರ ಮೇಲೆ ನಿಂದನೆ ಮಾಡುವ ಮೂಲಕ ಅವನು ಸಾರ್ವಜನಿಕ ಸ್ಥಳದಲ್ಲಿ ಉಪದ್ರವವನ್ನು ಸೃಷ್ಟಿಸಿದರು ಎಂಬುದು ಎಫ್ಐಆರ್ ನಲ್ಲಿ ದಾಖಲಾಗಿದೆ.
ಅವರನ್ನು ಬಂಧಿಸಿ ಸಫ್ದರ್‌ಜಂಗ್ ಆಸ್ಪತ್ರೆಗೆ ಕಳುಹಿಸಲಾಯಿತು, ಅವರು ಕುಡಿದಿದ್ದರು ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 294 (ಅಶ್ಲೀಲ ಕಾಯ್ದೆ) ಮತ್ತು 510 (ಕುಡಿತದ ವ್ಯಕ್ತಿಯಿಂದ ಸಾರ್ವಜನಿಕವಾಗಿ ದುರ್ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಏರ್ ಇಂಡಿಯಾ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ಉದ್ಯಮಿ ಶಂಕರ್ ಮಿಶ್ರಾ ಅವರನ್ನು ಬಂಧಿಸಲಾಗಿರುವ ಘಟನೆಯ ನಡುವೆ ಈ ಘಟನೆ ನಡೆದಿದೆ. ವಿಮಾನ ನಿಲ್ದಾಣದಲ್ಲಿ ಅಥವಾ ವಿಮಾನದೊಳಗೆ ಕುಡಿದು ಪ್ರಯಾಣಿಕರು ಅನುಚಿತವಾಗಿ ವರ್ತಿಸಿದ ಪ್ರಕರಣಗಳಲ್ಲಿ ಒಂದೇ ವಾರದಲ್ಲಿ ಇದು ಮೂರನೇ ಘಟನೆಯಾಗಿದೆ.