ಮಂಗಳವಾರದಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಭೇಟಿಯಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ವಿಷಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.
ಅಲ್ಲದೆ ಈ ಭೇಟಿ ಕುರಿತು ವ್ಯಂಗ್ಯವಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಈ ಭೇಟಿಯ ಫೋಟೋ ಹಾಗು ವಿಡಿಯೋವನ್ನು ಹರಿಬಿಡುವ ಮೂಲಕ ಯಾವ ಸಂದೇಶವನ್ನು ನೀಡಲು ಮುಂದಾಗಿದ್ದೀರಿ ಸಿದ್ದರಾಮಯ್ಯನವರೇ ಎಂದು ಹೇಳಿದ್ದರು. ಇದೀಗ ಧಾರವಾಡದಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಡಿಯೂರಪ್ಪನವರೊಂದಿಗಿನ ಭೇಟಿ ವೇಳೆ ಮಾತನಾಡಿದ್ದೇನು ಎಂಬುದನ್ನು ತಿಳಿಸಿದ್ದಾರೆ.
ಯಡಿಯೂರಪ್ಪನವರು ವೈಯಕ್ತಿಕವಾಗಿ ನನಗೆ ಆತ್ಮೀಯರಾಗಿದ್ದು, ರಾಜಕೀಯ ಬೇರೆ. ಆತ್ಮೀಯತೆ ಬೇರೆ. ಅವರೊಂದಿಗಿನ ಭೇಟಿ ವೇಳೆ ಹಲೋ ಹಲೋ ಎಂದಿದ್ದೇವೆ ಹೊರತು ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ, ಕೋಮುವಾದಿ ಬಿಜೆಪಿ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಕುಮಾರಸ್ವಾಮಿಯವರಿಗೆ ಈ ಕುರಿತು ಕಾಳಜಿ ಇದ್ದರೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿ ಎಂದು ಹೇಳಿದ್ದಾರೆ.