ಪೋರ್ಟ್ ಲೂಯಿಸ್: ಆಘಾತಕಾರಿ ಘಟನೆಯೊಂದರಲ್ಲಿ, ವಿಮಾನದ ಶೌಚಾಲಯದ ಡಸ್ಟ್‌ಬಿನ್‌ನಲ್ಲಿ ನವಜಾತ ಶಿಶು ಪತ್ತೆಯಾಗಿರುವ ಘಟನೆ ನಡೆದಿದೆ.
ಜನವರಿ 1ರ ಶನಿವಾರದಂದು ಏರ್ ಮಾರಿಷಸ್ ಏರ್‌ಬಸ್ A330-900ನ ಡಸ್ಟ್ ಬಿನ್ ನಲ್ಲಿ ರಕ್ತದಲ್ಲಿ ತೊಯ್ದ ಟಾಯ್ಲೆಟ್ ಪೇಪರ್ ತುಂಬಿದ ನವಜಾತ ಶಿಶುವು ಪತ್ತೆಯಾಗಿದೆ. ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯ ಸಮಯದಲ್ಲಿ ವಿಮಾನವನ್ನು ಶೋಧಿಸುವಾಗ ಮಗು ಪತ್ತೆಯಾಗಿದೆ.
ಶಿಶು ಪತ್ತೆಯಾದ ತಕ್ಷಣ, ವಿಮಾನದಲ್ಲಿ ಜನ್ಮ ನೀಡಿದ ಶಂಕಿತೆ 20 ವರ್ಷದ ಮಡಗಾಸ್ಕರ್ ಎಂಬ ಯುವತಿಯನ್ನು ಬಂಧಿಸಲಾಗಿದೆ. ಆಕೆ ತನ್ನ ತಾಯ್ನಾಡಿನಿಂದ ಮಾರಿಷಸ್‌ನ ಸರ್ ಸೀವೋಸಗೂರ್ ರಾಮಗೂಲಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜನವರಿ 1 ರಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಳು.
ಆರಂಭದಲ್ಲಿ ಮಗು ತನ್ನದಲ್ಲವೆಂದೇ ನಿರಾಕರಿಸಿದ ಶಂಕಿತ ತಾಯಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯ್ತು. ಈ ವೇಳೆ ಆಗಷ್ಟೇ ಹೆರಿಗೆಯಾಗಿರುವುದು ತಿಳಿದು ಬಂದಿದೆ. ಮಹಿಳೆಯನ್ನು ಆಸ್ಪತ್ರೆಯಲ್ಲಿ ಪೊಲೀಸ್ ನಿಗಾದಲ್ಲಿ ಇರಿಸಲಾಗಿತ್ತು. ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಇದೀಗ ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ.
ಈ ಹಿಂದೆ ಅಲಾಸ್ಕಾದ ಫೇರ್‌ಬ್ಯಾಂಕ್ಸ್‌ನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ರಟ್ಟಿನ ಪೆಟ್ಟಿಗೆಯಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಆ ಪೆಟ್ಟಿಗೆಯಲ್ಲಿ ಮಗುವಿಗೆ ಹಾಲುಣಿಸಲು ಸಾಧ್ಯವಿಲ್ಲ ಎಂದು ತಾಯಿ ಬರೆದ ಚೀಟಿ ಲಭ್ಯವಾಗಿತ್ತು.