ಫ್ರಾನ್ಸಿಸ್ಕೋ: ಮಾಜಿ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ತಾಳ್ಮೆಯನ್ನು ಕಳೆದುಕೊಂಡಿದ್ದಾನೆ. ಫ್ರಾನ್ಸಿಸ್ಕೋದಿಂದ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹೊಡೆದಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬಾಕ್ಸಿಂಗ್ ದಂತಕಥೆಯೊಂದಿಗೆ ವ್ಯಕ್ತಿಯೊಬ್ಬ ಮಾತನಾಡಲು ಮಾಡಿದ ಪ್ರಯತ್ನಗಳಿಂದ ಅವರನ್ನು ಕೆರಳಿಸಿದೆ. ವ್ಯಕ್ತಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದರಿಂದ, ಮೂಗಿನ ಬಳಿ ಸ್ವಲ್ಪ ಗಾಯ ಹಾಗೂ ರಕ್ತಸ್ರಾವ ಕಾಣಿಸಿಕೊಂಡಿದೆ.
ದೈಹಿಕ ವಾಗ್ವಾದ ಸಂಭವಿಸುವ ಮೊದಲು, ಮಾಜಿ ಬಾಕ್ಸರ್ ಸದ್ದಿಲ್ಲದೆ ಕುಳಿತಿರುವಾಗ, ವ್ಯಕ್ತಿಯು ಟೈಸನ್ನ ಆಸನದ ಮೇಲೆ ನಿಂತು, ತೋಳುಗಳನ್ನು ಬೀಸುತ್ತಾ ಅವನೊಂದಿಗೆ ಮಾತನಾಡಲು ಪ್ರಯತ್ನಿಸಿದ್ದಾನೆ. ವರದಿ ಪ್ರಕಾರ, ಟೈಸನ್ ಆರಂಭದಲ್ಲಿ ಪ್ರಯಾಣಿಕನೊಂದಿಗೆ ಸ್ನೇಹಪರನಾಗಿದ್ದನು. ಆದರೆ ಆ ವ್ಯಕ್ತಿ ಆತನನ್ನು ಪ್ರಚೋದನೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಅಲ್ಲದೆ ಆ ಪ್ರಯಾಣಿಕ ಕುಡಿದಿದ್ದ ಎನ್ನಲಾಗಿದೆ. ಮಾತುಗಳನ್ನು ನಿಲ್ಲಿಸುವಂತೆ ಟೈಸನ್ ಮನವಿ ಮಾಡಿದ್ರೂ ಕೂಡ ಆತ ಕೇಳುವ ಸ್ಥಿತಿಯಲ್ಲಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಟೈಸನ್ ತನ್ನ ಆಸನದಿಂದ ಹೊರಬಂದು ಪ್ರಯಾಣಿಕನಿಗೆ ಪಂಚ್ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಘಟನೆಯಲ್ಲಿ ಭಾಗಿಯಾಗಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ಕೆಲವು ಜನರು ಪ್ರಯಾಣಿಕನನ್ನು ದೂಷಿಸಿದ್ದರೆ, ಇನ್ನೂ ಕೆಲವರು ಟೈಸನ್ ಹೊಡೆಯಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.