ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಗಿಟ್ಟಿಸಿಕೊಳ್ಳೋದು ಸುಲಭವಲ್ಲ. ಎಷ್ಟೋ ವಿಷಯಗಳನ್ನು ನೀವು ಕಲಿತಿರಬೇಕು, ತಿಳಿದುಕೊಂಡಿರಬೇಕು. ಆತಂಕ ಹುಟ್ಟಿಸುವಂತಹ ಹವಾಮಾನವಿದ್ದಾಗ್ಲೂ ನೀವು ಪ್ರಯಾಣಿಸಬೇಕಾಗಿ ಬರುತ್ತದೆ. ಅಲ್ಲಿ ಎದುರಾಗುವ ಸವಾಲುಗಳನ್ನೆಲ್ಲ ಎದುರಿಸುವ ಛಾತಿ ಇರಬೇಕು.
ಬುದ್ಧಿವಂತಿಕೆ, ಚುರುಕುತನ ಹಾಗೂ ದೈಹಿಕ ಶಕ್ತಿ ಕೂಡ ಅವಶ್ಯಕ. ಅವೆಲ್ಲದಕ್ಕಿಂತ ಮುಖ್ಯವಾಗಿ ಪರಿಗಣನೆಯಾಗುವುದು ನಿಮ್ಮ ಎತ್ತರ. ವಿಮಾನ ಸಿಬ್ಬಂದಿ ಕನಿಷ್ಟ ಇಷ್ಟು ಹೈಟ್ ಇರಲೇಬೇಕು ಎಂಬ ನಿಯಮವಿದೆ. ಬ್ರಿಟಿಷ್ ಏರ್ವೇಸ್ ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವವರು ಕನಿಷ್ಟ 5.2 – 6.1 ಅಡಿ ಎತ್ತರವಿರಬೇಕು.
ನಿಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಕೂಡ ಪರಿಗಣಿಸಲಾಗುತ್ತದೆ. ಬೇರೆ ಬೇರೆ ವಿಮಾನಯಾನ ಸಂಸ್ಥೆಗಳಲ್ಲಿ ಬೇರೆ ಬೇರೆ ತೆರನಾದ ನಿಯಮಗಳಿಗೆ. ಎತ್ತರ ಮತ್ತು ತೂಕದ ಪ್ರಮಾಣ ಭಿನ್ನವಾಗಿದೆ. ಸಿಂಗಾಪುರ ಏರ್ ಲೈನ್ಸ್ ನಲ್ಲೂ ಮಹಿಳಾ ಸಿಬ್ಬಂದಿ ಕನಿಷ್ಟ 5.2 ಅಡಿ ಇರಲೇಬೇಕು.
ಪುರುಷ ಸಿಬ್ಬಂದಿಯ ಎತ್ತರ ಕಡಿಮೆ ಅಂದ್ರೂ 5.5 ಅಡಿ ಇರಬೇಕು. ಮಹಿಳಾ ಸಿಬ್ಬಂದಿ ಹೈ ಹೀಲ್ಸ್ ಧರಿಸುವುದರಿಂದ ಕೊಂಚ ಕುಳ್ಳಗಿದ್ರೂ ನೋ ಪ್ರಾಬ್ಲೆಮ್ ಎನ್ನುತ್ತಾರೆ ಅಧಿಕಾರಿಗಳು.
ಏರ್ ಹೋಸ್ಟೆಸ್ ಮತ್ತು ಫ್ಲೈಟ್ ಸ್ಟೀವರ್ಡ್ ಆಗಲು ಕನಿಷ್ಟ 18 ರಿಂದ ಗರಿಷ್ಟ 26 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಕೆಲವೊಂದು ಸಂಸ್ಥೆಗಳಲ್ಲಿ ವಯೋಮಿತಿ ಬದಲಾಗಬಹುದು. ಏರ್ ಹೋಸ್ಟೆಸ್ ಮತ್ತು ಫ್ಲೈಟ್ ಸ್ಟೀವರ್ಡ್ ಆಗಲು 10+2 (ವಿಜ್ಞಾನ, ಕಲಾ ಮತ್ತು ವಾಣಿಜ್ಯ) ವಿದ್ಯಾರ್ಹತೆಯನ್ನು ಹೊಂದಿರಬೇಕು. ಏರ್ ಹೋಸ್ಟೆಸ್ ಮತ್ತು ಫ್ಲೈಟ್ ಸ್ಟೀವರ್ಡ್ ಆಗಲು ಅವಿವಾಹಿತರಿಗೇ ಹೆಚ್ಚು ಆದ್ಯತೆ ನೀಡಲಾಗುವುದು. ಏರ್ ಹೋಸ್ಟೆಸ್ ಮತ್ತೂ ಫ್ಲೈಟ್ ಸ್ಟೀವರ್ಡ್ ಆಗುವ ಅಭ್ಯರ್ಥಿಗಳು ಹಿಂದಿ, ಇಂಗ್ಲೀಷ್ ಮತ್ತು ಇತರೆ ಭಾಷೆಗಳನ್ನು ಬಲ್ಲವರಾಗಿರಬೇಕು.
ಗಗನಸಖಿಯಾಗಲು ಹಲವು ಕೋರ್ಸ್ಗಳು ಇವೆ ಹಾಗಾಗಿ ಗಗನಸಖಿಯಾಗಲು ಆಸಕ್ತರು ಆ ವಿಷಯದಲ್ಲಿ ಡಿಪ್ಲೋಮ ಅಥವಾ ಪದವಿ ಅಥವಾ ಪ್ರಮಾಣಪತ್ರವನ್ನು ಪಡೆಯಬಹುದು. ಈ ಅಧ್ಯಯನಗಳನ್ನು ಮಾಡಿದಲ್ಲಿ ಕೌಶಲ್ಯ, ಡ್ರೆಸ್ಸಿಂಗ್ ಸೆನ್ಸ್, ಹಲವು ಜನರ ಬಳಿ ಹೇಗೆ ಸಂವಹನ ಮಾಡಬೇಕು, ತುರ್ತು ಪರಿಸ್ಥಿತಿಯಲ್ಲಿ ಹೇಗೆ ಕ್ರಮಕೈಗೊಳ್ಳಬೇಕು ಹೀಗೆ ಹತ್ತು ಹಲವು ವಿಷಯಗಳನ್ನು ಕಲಿಯಬಹುದು.