ಚಳಿಗಾಲವಿರಲಿ, ಬೇಸಿಗೆ ಅಥವಾ ಮಳೆಗಾಲವಿರಲಿ ಎಲ್ಲಾ ಋತುಗಳಲ್ಲೂ ಕಾಡುವ ಅನಾರೋಗ್ಯವೆಂದರೆ ಜ್ವರ. ಸಾಮಾನ್ಯವಾಗಿ ಇದು ಹಠಾತ್ ಹವಾಮಾನ ಬದಲಾವಣೆಯಿಂದ ಉಂಟಾಗುತ್ತದೆ. ಜ್ವರ ಬಂದ ತಕ್ಷಣ ವೈದ್ಯರ ಬಳಿಗೆ ಹೋಗುವುದು, ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಮುಖ್ಯ. ಅದರ ಜೊತೆಗೆ ಮನೆಯಲ್ಲಿಯೂ ಕೆಲವೊಂದು ಕಾಳಜಿ ತೆಗೆದುಕೊಳ್ಳಬೇಕು.
ಜ್ವರದ ಕಾವೇರಿದ್ದಾಗ ಕೆಲವೊಂದು ಸಿಂಪಲ್ ಟ್ರಿಕ್ಸ್ ಮೂಲಕ ಜ್ವರದ ತಾಪವನ್ನು ಇಳಿಸಲು ಪ್ರಯತ್ನಿಸಬೇಕು. ಆರೋಗ್ಯವಂತ ವಯಸ್ಕನ ಸಾಮಾನ್ಯ ದೇಹದ ಉಷ್ಣತೆಯು 98.6 °F ಇರಬೇಕು. ಇದನ್ನು ಮೀರಿದರೆ ಜ್ವರ ಬಂದಿದೆ ಎಂದರ್ಥ. ದೇಹದ ಉಷ್ಣತೆ ಹೆಚ್ಚಳ, ಮೈಕೈ ನೋವು, ನಡುಕ ಇವೆಲ್ಲವೂ ಜ್ವರದ ಲಕ್ಷಣಗಳು.
1. ಸಾಕಷ್ಟು ನೀರು ಕುಡಿಯಿರಿ
ಜ್ವರವಿದ್ದಾಗ ದೇಹದ ಉಷ್ಣತೆ ಬಹಳಷ್ಟು ಹೆಚ್ಚಾಗುತ್ತದೆ. ಆದ್ದರಿಂದ ತಾಪಮಾನವನ್ನು ಕಾಪಾಡಿಕೊಳ್ಳಲು ನೀವು ಹೆಚ್ಚು ಹೆಚ್ಚು ನೀರು ಕುಡಿಯುವುದು ಮುಖ್ಯ. ಎಳನೀರು ಅಥವಾ ಜ್ಯೂಸ್ ಕೂಡ ಸೇವನೆ ಮಾಡಬಹುದು. ಡಿಹೈಡ್ರೇಶನ್ ಸಮಸ್ಯೆಗೆ ಇದರಿಂದ ಪರಿಹಾರ ಸಿಗುತ್ತದೆ.
2. ಉಪ್ಪು ನೀರಿನಿಂದ ಗಾರ್ಗಲ್ ಮಾಡಿ
ಕೆಲವೊಮ್ಮೆ ಜ್ವರದ ಜೊತೆಗೆ ಗಂಟಲು ನೋವು ಕೂಡ ಶುರುವಾಗುತ್ತದೆ. ಉಗುರು ಬೆಚ್ಚಗಿನ ನೀರಿಗೆ ಎರಡು ಚಿಟಿಕೆ ಉಪ್ಪು ಸೇರಿಸಿ ಅದರಿಂದ ಗಾರ್ಗಲ್ ಮಾಡಿ. ಈ ರೀತಿ ಮಾಡುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.
3. ಸಾಕಷ್ಟು ವಿಶ್ರಾಂತಿ ಪಡೆಯಿರಿ
ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಸಾಕಷ್ಟು ವಿಶ್ರಾಂತಿ ಪಡೆಯಿರಿ. ಹೆಚ್ಚು ದೈಹಿಕ ಚಟುವಟಿಕೆ ಅಥವಾ ಯಾವುದೇ ರೀತಿಯ ಒತ್ತಡದ ಕೆಲಸ ಬೇಡ. ಇದರಿಂದ ಆರೋಗ್ಯ ಮತ್ತಷ್ಟು ಹದಗೆಡಬಹುದು.
4. ಒದ್ದೆ ಬಟ್ಟೆ ಹಾಕಿ ಸಾಮಾನ್ಯವಾಗಿ ಯಾರಿಗಾದರೂ ಜ್ವರ ಬಂದಾಗ ದೇಹವು ಶಾಖದಿಂದ ಸುಡುತ್ತಿರುತ್ತದೆ. ತಕ್ಷಣಕ್ಕೆ ದೇಹದ ಉಷ್ಣತೆಯನ್ನು ತಗ್ಗಿಸಲು ಹಣೆ ಮೇಲೆ ಒದ್ದೆ ಬಟ್ಟೆಯನ್ನು ಹಾಕಿ. ಜ್ವರ ವಿಪರೀತ ಹೆಚ್ಚಾಗಿದ್ದರೆ ನೀವು ಒದ್ದೆ ಸ್ಪಂಜಿನ ಸಹಾಯದಿಂದ ಇಡೀ ದೇಹವನ್ನು ಒರೆಸಬಹುದು.
5. ಸಡಿಲವಾದ ಬಟ್ಟೆಗಳನ್ನು ಧರಿಸಿ
ಜ್ವರವಿದ್ದಾಗ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ. ಅದು ದೇಹದ ಶಾಖವನ್ನು ಇಳಿಮುಖ ಮಾಡುವುದಿಲ್ಲ. ಜ್ವರವಿದ್ದಾಗ ಆರಾಮದಾಯಕವಾದ ಬಟ್ಟೆಗಳನ್ನು ಧರಿಸಬೇಕು.