ಆ. 31 ರ ಬುಧವಾರದಂದು ಗಣೇಶ ಚತುರ್ಥಿಯನ್ನು ದೇಶದೆಲ್ಲೆಡೆ ಆಚರಿಸಲಾಗ್ತಿದೆ. ಎಲ್ಲೆಲ್ಲೂ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ವಿಘ್ನನಾಶಕನ ಮೂರ್ತಿಯನ್ನು ಮನೆಗೆ ತಂದು ಭಕ್ತರು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಲಿದ್ದಾರೆ. ಗಣೇಶನ ಪೂಜೆಯನ್ನು ಮಾಡುವ ಮೊದಲು ಆತನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಬೇಕಾಗುತ್ತದೆ. ಹಾಗೆ ಕೆಲವೊಂದು ವಸ್ತುಗಳನ್ನು ದೂರ ಇಡಬೇಕು.
ತನು-ಮನದಿಂದ ಗಣೇಶನ ಪೂಜೆ ಮಾಡುವವರು ಗಣೇಶ ಮೂರ್ತಿಯನ್ನು ಸ್ಥಾಪನೆ ಮಾಡುವುದರಿಂದ ಹಿಡಿದು ವಿಸರ್ಜನೆ ಮಾಡುವವರೆಗೂ ಪಂಡಿತರ ಅಭಿಪ್ರಾಯ ಕೇಳಿ ನಡೆಯುವುದು ಸೂಕ್ತ.
ಗಣೇಶ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಮಧ್ಯಾಹ್ನ ಜನಿಸಿದ್ದಾನೆ. ಹಾಗಾಗಿ ಮಧ್ಯಾಹ್ನ ಗಣೇಶನಿಗೆ ಪೂಜೆ ಮಾಡಿ.
ಒಂದು ಚೌಕವಾದ ಹೊಸ ಬಟ್ಟೆಯನ್ನು ಅಡಿಗಿಟ್ಟು ಅದ್ರ ಮೇಲೆ ಗಣೇಶ ಮೂರ್ತಿಯನ್ನು ಇಡಬೇಕು.
ಕೈ ಮುಗಿದು ಗಣೇಶನ ಧ್ಯಾನ ಮಾಡಬೇಕು.
ಸಿಂಧೂರ, ಅಕ್ಷತೆಯಿಂದ ತಿಲಕವಿಡಿ. ಹೂಗಳಿಂದ ಮಾಲೆ ಮಾಡಿ ಗಣೇಶನಿಗೆ ಅರ್ಪಿಸಿ. ದರ್ಬೆ ಗಣೇಶನಿಗೆ ಶ್ರೇಷ್ಠ. ಹಬ್ಬದಂದು ಕೈಲಾದಷ್ಟು ದುರ್ಬೆಯನ್ನು ಗಣೇಶನಿಗೆ ಅರ್ಪಿಸಿ. ಮರೆತೂ ತುಳಸಿಯನ್ನು ಗಣೇಶನಿಗೆ ಅರ್ಪಿಸಬೇಡಿ. ತುಳಸಿ ಗಣೇಶನಿಗೆ ವರ್ಜಿತ.
ಧೂಪ-ದೀಪದಿಂದ ಗಣೇಶನಿಗೆ ಪೂಜೆ ಮಾಡಿ. ಮೋದಕ ಪ್ರಿಯ ಗಣೇಶ. ಹಾಗಾಗಿ ಮೋದಕ, ಪಂಚ ಕಜ್ಜಾಯ, ಲಡ್ಡು ಸೇರಿದಂತೆ ಬಗೆ ಬಗೆಯ ತಿನಿಸುಗಳನ್ನು, ಹಣ್ಣುಗಳನ್ನು ಗಣೇಶನಿಗೆ ನೀಡಿ.
ಕುಟುಂಬದ ಎಲ್ಲ ಸದಸ್ಯರೂ ಸೇರಿ ಗಣೇಶನಿಗೆ ಪೂಜೆ ಮಾಡಿ.