ಬೆಂಗಳೂರು : ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದ್ದು, ಮತದಾನ ಆರಂಭವಾಗಲಿದೆ.
ರಾಜ್ಯದಲ್ಲಿ ಒಟ್ಟು 6,072 ಮತಗಟ್ಟೆಗಳನ್ನು ಈ ಚುನಾವಣೆಗಾಗಿ ಸಿದ್ಧಪಡಿಸಲಾಗಿದೆ. 25 ಸ್ಥಾನಗಳಿಗಾಗಿ 90 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಳೆ ಬೆಳಿಗ್ಗೆ 8 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಡಿ. 14ರಂದು ಫಲಿತಾಂಶ ಹೊರ ಬೀಳಲಿದೆ.
25 ಸ್ಥಾನಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 20 ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. 6 ಕಡೆ ಜೆಡಿಎಸ್ ಸ್ಪರ್ಧೆ ಮಾಡಿದೆ. ಉಳಿದಂತೆ 33 ಜನ ಪಕ್ಷೇತರರು ಕಣದಲ್ಲಿ ಇದ್ದಾರೆ. ಇನ್ನಿತರ ಪಕ್ಷಗಳ ಅಭ್ಯರ್ಥಿಗಳು ಕೂಡ ಸ್ಪರ್ಧೆ ಮಾಡಿದ್ದಾರೆ. ಈ ಬಾರಿ ಓರ್ವ ಮಹಿಳೆ ಮಾತ್ರ ಈ ಚುನಾವಣೆಯಲ್ಲಿದ್ದಾರೆ.
ಬುಧವಾರವೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಹೀಗಾಗಿ ಅಭ್ಯರ್ಥಿಗಳು ಮತದಾರರನ್ನು ನೇರವಾಗಿ ಭೇಟಿ ಮಾಡಿ ಮನವೊಲಿಸುವ ಕಾರ್ಯವನ್ನು ಇನ್ನೂ ಮಾಡುತ್ತಿದ್ದಾರೆ. ಈಗಾಗಲೇ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ನಾಯಕರು ಮತ ಯಾಚಿಸಿದ್ದಾರೆ. ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಓಲೈಸುವ ಕಾರ್ಯವನ್ನು ಎಲ್ಲ ನಾಯಕರು ಹಾಗೂ ಅಭ್ಯರ್ಥಿಗಳು ಮಾಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಪಕ್ಷೇತರರು ಕೂಡ ಪಕ್ಷಗಳಿಗೆ ಪೆಟ್ಟು ನೀಡಬೇಕೆಂದು ಪ್ರಯತ್ನಿಸಿದ್ದಾರೆ.